
ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ. 33ರಷ್ಟು ಮೀಸಲಾತಿ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರ, ಕೆಎಸ್‌ಬಿಸಿ ಮತ್ತು ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ವಕೀಲ ನಾರಾಯಣ ಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ರಾಜ್ಯದ ಮುಖ್ಯ ಕಾರ್ಯದರ್ಶಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ರಿಜಿಸ್ಟ್ರಾರ್ ಮತ್ತು ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್ ಪರವಾಗಿ ಸರ್ಕಾರದ ವಕೀಲರು, ಕೆಎಸ್‌ಬಿಸಿ ಪರವಾಗಿ ವಕೀಲ ಟಿ ಪಿ ವಿವೇಕಾನಂದ ಮತ್ತು ಬೆಂಗಳೂರು ವಕೀಲರ ಸಂಘದ ಪರ ಎಚ್ ವಿ ಪ್ರವೀಣ್ ಗೌಡ ಅವರಿಗೆ ನೋಟಿಸ್ ಪಡೆಯಲು ನಿರ್ದೇಶಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.
ಕೆಎಸ್‌ಬಿಸಿ ಚುನಾವಣೆಯಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ನಿರ್ದೇಶಿಸಬೇಕು. ಎಸ್‌ಸಿಬಿಎ ವರ್ಸಸ್ ಬಿ ಡಿ ಕೌಶಿಕ್, ಫೌಜಿಯಾ ರೆಹಮಾನ್ ವರ್ಸಸ್ ದೆಹಲಿ ವಕೀಲರ ಪರಿಷತ್ ಪ್ರಕರಣಗಳಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಪ್ರಕಾರ ಕೆಎಸ್‌ಬಿಸಿ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಒಳಗೊಂಡು ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಮೀಸಲಾತಿ ಜಾರಿ ಮಾಡಲು ನಿರ್ದೇಶಿಸಬೇಕು. ಮಹಿಳಾ ಮೀಸಲಾತಿಯನ್ನು ಸಾಂಸ್ಥಿಕಗೊಳಿಸುವ ನಿಟ್ಟಿನಲ್ಲಿ ಕೆಎಸ್‌ಬಿಸಿ ಬೈಲಾಗೆ ತಿದ್ದುಪಡಿ ಮಾಡಬೇಕು. ಆ ಮೂಲಕ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಶೇ.33ರಷ್ಟು ಆಡಳಿತ ಮಂಡಳಿಯಲ್ಲಿ ಮೀಸಲಾತಿ ಕಲ್ಪಿಸಲು ಆದೇಶಿಸಬೇಕು. ಮುಂದಿನ ದಿನಗಳಲ್ಲಿ ಕೆಎಸ್‌ಬಿಸಿ ಚುನಾವಣೆ ನಡೆಸುವ ಚುನಾವಣಾಧಿಕಾರಿಗೆ ಶೇ. 33ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲು ಆದೇಶಿಸಬೇಕು ಎಂದು ಕೋರಲಾಗಿದೆ.
ಕೆಎಸ್‌ಬಿಸಿಗೆ ಚುನಾವಣೆ ನಡೆಸಬೇಕು ಎಂದು ಕೋರಿರುವ ಮತ್ತೊಂದು ಅರ್ಜಿಯೂ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇತ್ತೀಚೆಗೆ ಬೆಂಗಳೂರು ಮತ್ತು ತುಮಕೂರು ವಕೀಲರ ಸಂಘಗಳು ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಿ ಚುನಾವಣೆ ನಡೆಸಿವೆ.