ನಿಮ್ಮ ಬೆನ್ನು ನೀವೇ ತಟ್ಟಿಕೊಂಡಂತಿದೆ: ಕೊರೊನಿಲ್‌ ಕುರಿತ ರಾಮ್‌ದೇವ್‌ ಸ್ಪಷ್ಟೀಕರಣದ ಬಗ್ಗೆ ನ್ಯಾಯಾಲಯದ ಅಸಮಾಧಾನ

ನ್ಯಾಯಾಲಯಕ್ಕೆ ಸಲ್ಲಿಸಿರುವ ಪತಂಜಲಿಯ ಕರಡು ಸ್ಪಷ್ಟೀಕರಣ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವಂತೆ ತೋರುತ್ತಿದ್ದು ಇದು ಸಾರ್ವಜನಿಕ ವೇದಿಕೆಗಳಲ್ಲಿ ರಾಮದೇವ್ ಮಾಡಿದ್ದ ಪ್ರತಿಪಾದನೆಯಿಂದ ಹಿಂದೆ ಸರಿದಂತೆ ತೋರುವುದಿಲ್ಲ ಎಂದ ಪೀಠ.
Ramdev and Coronil
Ramdev and Coronil facebook

ಕೊರೋನಿಲ್‌ ಕೋವಿಡ್‌ಗೆ ಔಷಧವಲ್ಲ ಎನ್ನಲು ಉತ್ತಮ ಸ್ಪಷ್ಟೀಕರಣ ನೀಡುವಂತೆ ಬಾಬಾ ರಾಮ್‌ದೇವ್ ಮತ್ತು ಅವರ ಕಂಪನಿ ಪತಂಜಲಿ ಆಯುರ್ವೇದಕ್ಕೆ ದೆಹಲಿ ಹೈಕೋರ್ಟ್‌ ಗುರುವಾರ ಸೂಚಿಸಿದೆ [ಏಮ್ಸ್‌ ಸ್ಥಾನಿಕ ವೈದ್ಯರು, ರಿಶಿಕೇಶ್‌ ಮತ್ತಿತರರು ಹಾಗೂ ರಾಮ್‌ ಕಿಶನ್‌ ಯಾದವ್‌ ಅಲಿಯಾಸ್‌ ಸ್ವಾಮಿ ರಾಮದೇವ್‌ ಇನ್ನಿತರರ ನಡುವಣ ಪ್ರಕರಣ].

ಪತಂಜಲಿಯ ಕರಡು ಸ್ಪಷ್ಟೀಕರಣ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವಂತೆ ತೋರುತ್ತಿದ್ದು ಇದು ಸಾರ್ವಜನಿಕ ವೇದಿಕೆಗಳಲ್ಲಿ ರಾಮದೇವ್‌ ಮಾಡಿದ್ದ ಪ್ರತಿಪಾದನೆಯಿಂದ ಹಿಂದೆ ಸರಿದಂತೆ ತೋರುವುದಿಲ್ಲ ಎಂದು ನ್ಯಾಯಮೂರ್ತಿ ಅನೂಪ್‌ ಜೈರಾಮ್ ಭಂಭಾನಿ ಅಭಿಪ್ರಾಯಪಟ್ಟರು.

“ನೋಡಿ ಮುಖ್ಯವಾದ ಸಂಗತಿ ಎಂದರೆ, ಅನಗತ್ಯ ತಾಂತ್ರಿಕ ಶಬ್ದಾಡಂಬರ ಮತ್ತು ಸೂಕ್ಷ್ಮ ಅರ್ಥ ವ್ಯತ್ಯಾಸಗಳಿಂದ ಅಂತರ ಕಾಯ್ದುಕೊಳ್ಳಬೇಕು. ನೀವು ಸಾರ್ವಜನಿಕರಿಗೆ ಎರಡು ರೀತಿಯ ಭಾವನೆ ಮೂಡುವಂತೆ ಮಾಡಿದ್ದೀರಿ: ಒಂದು ಅಲೋಪತಿ ವೈದ್ಯರ ಬಳಿ (ಕೋವಿಡ್‌ಗೆ) ಚಿಕಿತ್ಸೆ ಮತ್ತು ಔಷಧ ಇಲ್ಲ ಎಂಬುದು. ಎರಡನೆಯದು ಕೊರೊನಿಲ್‌ ಒಂದು ಚಿಕಿತ್ಸೆ ಮತ್ತು ಔಷಧ ಎಂಬುದು. ನಿಮ್ಮ ಸಂಹವನದಲ್ಲಿ ವಿಚಾರ ಸ್ಪಷ್ಟವಾಗಿರಬೇಕಿತ್ತು. ಪದಗಳು ಆಲೋಚನೆಯನ್ನು ವ್ಯಕ್ತಪಡಿಸಬೇಕು. ನಿಮ್ಮ ಆಲೋಚನೆಗಳು ಪ್ರಾಮಾಣಿಕವಾಗಿದ್ದರೆ ಅದು ಈ ಸ್ಪಷ್ಟೀಕರಣದಲ್ಲಿ ಅಡಕವಾಗಿರುತ್ತದೆ," ಎಂದು ನ್ಯಾ. ಭಂಭಾನಿ ಚುರುಕು ಮುಟ್ಟಿಸಿದರು.

ಅಲೋಪತಿ ಚಿಕಿತ್ಸಾ ಪದ್ಧತಿಯ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಚುರ ಪಡಿಸಿರುವ ಹಾಗೂ ಕೋವಿಡ್‌ಗೆ ಪತಂಜಲಿ ಬ್ರ್ಯಾಂಡ್‌ನ ಔಷಧ ಕೊರೊನಿಲ್, ಪರಿಹಾರ ಎಂದು ಘಂಟಾಘೋಷವಾಗಿ ಹೇಳಿರುವ ಬಾಬಾ ರಾಮ್‌ದೇವ್‌ ಅವರ ಹೇಳಿಕೆಗಳನ್ನು ಪ್ರಶ್ನಿಸಿ ಕೆಲವು ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
ಅಲೋಪತಿ ಕುರಿತ ತಮ್ಮ ಹೇಳಿಕೆ ಬಗ್ಗೆ ಪತ್ರಿಕ್ರಿಯೆ ಸಲ್ಲಿಸಲು ಬಾಬಾ ರಾಮ್‌ದೇವ್‌ಗೆ ನೋಟಿಸ್‌ ನೀಡಿದ ದೆಹಲಿ ಹೈಕೊರ್ಟ್‌

ಕಳೆದ ವಿಚಾರಣೆಯಲ್ಲಿ ತಾವು ಸ್ಪಷ್ಟಕೀರಣ ನೀಡಲು ಸಿದ್ಧವಿರುವುದಾಗಿ ರಾಮದೇವ್‌ ಮತ್ತು ಪತಂಜಲಿ ಸಂಸ್ಥೆ ತಿಳಿಸಿದ್ದವು. ಅರ್ಜಿದಾರರ ಕಡೆಯ ವಕೀಲರೊಂದಿಗೆ ಸಮಾಲೋಚಿಸಿ ಸ್ಪಷ್ಟೀಕರಣ ನೀಡುವುದಾಗಿ ನ್ಯಾಯಾಲಯಕ್ಕೆ ವಿವರಿಸಲಾಗಿತ್ತು. ಆದರೆ ಎರಡೂ ಕಡೆಯವರು ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ ಎಂಬ ವಿಚಾರವನ್ನು ನ್ಯಾ. ಭಂಭಾನಿ ಅವರಿಗೆ ಇಂದು ತಿಳಿಸಲಾಯಿತು.

ಕೊರೊನಿಲ್ ಪೂರಕ ಔಷಧವಾಗಿದೆ ಮತ್ತು ರಾಮದೇವ್ ವೈದ್ಯರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ ಎಂಬ ವಿಚಾರ ನ್ಯಾಯಾಲಯದಲ್ಲಿ ಓದಲಾದ ಸ್ಪಷ್ಟೀಕರಣದಲ್ಲಿತ್ತು. ಪ್ರತಿ ವೈದ್ಯ ಪದ್ದತಿಯೂ ಸಾಮಾನ್ಯ ಉದ್ದೇಶ ಹೊಂದಿದ್ದು ತನ್ನದೇ ಆದ ವಿಶಿಷ್ಟ ಪ್ರಯೋಜನಗಳನ್ನು ಒಳಗೊಂಡಿದೆ. ಅದು ಉಳಿದವಕ್ಕಿಂತಲೂ ಕೀಳಲ್ಲ ಅಥವಾ ಮೇಲಲ್ಲ ಎಂಬುದು ರಾಮದೇವ್‌ ಅವರ ದೃಢವಾದ ನಂಬಿಕೆ ಎಂಬುದಾಗಿ ಹಿರಿಯ ನ್ಯಾಯವಾದಿ ಪಿ ವಿ ಕಪೂರ್‌ ತಿಳಿಸಿದರು.

ವೈದ್ಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಖಿಲ್‌ ಸಿಬಲ್‌ "ಕೊರೊನಿಲ್‌ ಚಿಕಿತ್ಸೆ ಅಥವಾ ಔಷಧವಲ್ಲ ಎಂಬುದನ್ನು ಸ್ಪಷ್ಟೀಕರಣದಲ್ಲಿ ಖಚಿತವಾಗಿ ತಿಳಿಸಬೇಕು ಎಂದು ಪಟ್ಟು ಹೀಡಿದರು. ವೈದ್ಯರ ಬಗ್ಗೆ ರಾಮದೇವ್‌ ಅವರು ಮೌಖಿಕವಾಗಿ ನೀಡಿದ ಹೇಳಿಕೆಯನ್ನು ಹಿಂಪಡೆಯಲಾಗಿದೆ ಎಂಬುದು ಕೂಡ ತಪ್ಪು/ ಕೊರೋನಿಲ್‌ ಈಗಲೂ ಕೋವಿಡ್‌ಗೆ ಚಿಕಿತ್ಸೆ ಎಂದು ಜಾಹೀರಾತು ನೀಡಿ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ತೋರಿಸಲು ದಾಖಲೆಗಳಿವೆ" ಎಂದು ಅಖಿಲ್‌ ತಿಳಿಸಿದರು.

ಅರ್ಹತೆ ಆಧಾರದಲ್ಲಿ ಪ್ರಕರಣವನ್ನು ಆಲಿಸಬೇಕು ಎಂದು ಸಿಬಲ್‌ ಒತ್ತಾಯಿಸಿದರೂ ಸಮಸ್ಯೆಯನ್ನು ಪರಿಹರಿಸಲು ಮತ್ತೊಂದು ಯತ್ನ ಮಾಡಲಿದ್ದೇವೆ. ಪತಂಜಲಿ ಉತ್ತಮ ಸ್ಪಷ್ಟೀಕರಣ ನೀಡಲಿದೆ ಎಂದು ಕಪೂರ್‌ ವಾದಿಸಿದರು. ಆಗಸ್ಟ್ 18 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದ ಪೀಠ ಅಷ್ಟರೊಳಗೆ ಯಾವುದೇ ಸ್ಪಷ್ಟನೆ ನೀಡದಿದ್ದರೆ ಪ್ರಕರಣವನ್ನು ಅರ್ಹತೆಯ ಆಲಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

Related Stories

No stories found.
Kannada Bar & Bench
kannada.barandbench.com