ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಿಗೆ ಅಧ್ಯಕ್ಷ, ಸದಸ್ಯರ ಆಯ್ಕೆ: ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶನ

ಯಾವುದೇ ಆಯ್ಕೆ ಮಾನದಂಡ ಅಥವಾ ಪ್ರಕ್ರಿಯೆ ಸೂಚಿಸಲು ವಿಫಲವಾದರೆ ರಾಜ್ಯದ ಕಡೆಯಿಂದ ಕರ್ತವ್ಯ ಲೋಪವಾಗಲಿದೆ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶಕ್ಕಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
Land Grabbing Prohibition Special Court
Land Grabbing Prohibition Special Court
Published on

ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಈಚೆಗೆ ನಿರ್ದೇಶನ ನೀಡಿದೆ.

ನಿವೃತ್ತ ಜಿಲ್ಲಾ ನ್ಯಾಯಾಧೀಶ ದೇವಾನಂದ ಪುಟ್ಟಪ್ಪ ನಾಯಕ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

“ಸರ್ಕಾರವು ಹೊರಡಿಸಿರುವ ಆಕ್ಷೇಪಾರ್ಹ ಅಧಿಸೂಚನೆ ಅಥವಾ ಜಾಹೀರಾತನಲ್ಲಿ ಉಲ್ಲೇಖಿಸಿದಂತೆ ಒಂದೇ ಹುದ್ದೆಗೆ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರುಗಳ ಆಯ್ಕೆಗೆ ಯಾವುದೇ ಕಾರ್ಯವಿಧಾನ ಅಥವಾ ಮಾರ್ಗಸೂಚಿಗಳಿಲ್ಲದಿರುವುದು ಕಂಡು ಬಂದಿದೆ. ನೇಮಕಾತಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆದರೆ, ಯಾವ ರೀತಿ ಆಯ್ಕೆ ಮಾಡಬಹುದು ಎಂಬ ಯಾವುದೇ ಕಾರ್ಯವಿಧಾನವನ್ನು ನಿರ್ದಿಷ್ಟಪಡಿಸಿಲ್ಲ. ಯಾವುದೇ ಆಯ್ಕೆ ಮಾನದಂಡ ಅಥವಾ ಪ್ರಕ್ರಿಯೆ ಸೂಚಿಸಲು ವಿಫಲವಾದರೆ ರಾಜ್ಯದ ಕಡೆಯಿಂದ ಕರ್ತವ್ಯ ಲೋಪವಾಗಲಿದೆ ಮತ್ತು ಸಾರ್ವಜನಿಕ ಉದ್ಯೋಗದಲ್ಲಿಸಮಾನ ಅವಕಾಶಕ್ಕಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ 2011ರ ಸೆಕ್ಷನ್‌ 7ರಡಿಯಲ್ಲಿ ಒರ್ವ ಅಧ್ಯಕ್ಷರು, ಇಬ್ಬರು ನ್ಯಾಯಾಂಗ ಸದಸ್ಯರು ಮತ್ತು ಇಬ್ಬರು ಕಂದಾಯ ಸದಸ್ಯರನ್ನು ಹೊಂದಿರುವ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಕಾಯಿದೆಯು ಕನಿಷ್ಠ ಅರ್ಹತೆಗಳನ್ನು ಮಾತ್ರ ಸೂಚಿಸುತ್ತದೆ. ಅಧ್ಯಕ್ಷರು ಹಾಲಿ ಅಥವಾ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿರಬೇಕು. ನ್ಯಾಯಾಂಗ ಸದಸ್ಯರು ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿರಬೇಕು ಮತ್ತು ಕಂದಾಯ ಸದಸ್ಯರು ಉಪ ಆಯುಕ್ತರ ಹುದ್ದೆಗಿಂತ ಕಡಿಮೆಯಿಲ್ಲದ ಹುದ್ದೆಯನ್ನು ಹೊಂದಿರಬೇಕು ಅಥವಾ ಹೊಂದಿರಬೇಕು ಎಂದಷ್ಟೇ ಹೇಳುತ್ತದೆ. ಆದರೆ, ನೇಮಕ ಅಥವಾ ಆಯ್ಕೆಗೆ ನಿರ್ದಿಷ್ಟ ಮಾರ್ಗಸೂಚಿಗಳು ಇಲ್ಲ. ಹೀಗಾಗಿ, ಸರ್ಕಾರ ತುರ್ತಾಗಿ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

“ಆಯ್ಕೆ ಪ್ರಕ್ರಿಯೆಯಲ್ಲಿ ಅಸ್ಪಷ್ಟತೆಯಿದೆ. ಹಾಗಾಗಿ, ಸರ್ಕಾರ 2025ರ ಜುಲೈ 16ರಂದು ನ್ಯಾಯಾಲಯಕ್ಕೆ ಸದಸ್ಯರ ನೇಮಕಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯು ಭಾರತದ ಸಂವಿಧಾನದ 14 ಮತ್ತು 16ನೇ ವಿಧಿಯ ಉಲ್ಲಂಘನೆಯಾಗಿದೆ. ಈ ಕಾಯಿದೆಯು ನೇಮಕಾತಿ ವ್ಯಾಖ್ಯಾನದ ಆಯ್ಕೆಯನ್ನು ನೇಮಕಾತಿ ಪ್ರಾಧಿಕಾರದ ಅಂದರೆ ರಾಜ್ಯದ ವಿವೇಚನೆಗೆ ಬಿಡುತ್ತದೆ, ಇದು ನಿಯಮಕ್ಕೆ ವಿರುದ್ಧವಾಗಿದೆ” ಎಂದು ಪೀಠ ಹೇಳಿದೆ.

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಾಲಯವು “ಹಾಲಿ ಪ್ರಕರಣವು 2011ರ ಕಾಯಿದೆಯ ಸೆಕ್ಷನ್‌ 7 ರ ಅಡಿಯಲ್ಲಿ ಒದಗಿಸಲಾದ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಂಗ ಸದಸ್ಯರ ಹುದ್ದೆಗೆ ಸಮಾನ ಅರ್ಹತೆ ಹೊಂದಿರುವ ಮತ್ತು ಕನಿಷ್ಠ ಅಗತ್ಯ ಅರ್ಹತೆ ಹೊಂದಿರುವ ಸದಸ್ಯರ ಅರ್ಹತಾ ಮಾನದಂಡಗಳನ್ನು ನಿರ್ದಿಷ್ಟಪಡಿಸಿಲ್ಲ” ಎಂದು ಹೇಳಿದೆ.

ಅರ್ಜಿದಾರರು ಆಗಸ್ಟ್‌ 8ರಂದು ನ್ಯಾಯಾಂಗ ಸದಸ್ಯ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಥವಾ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ (ಅಧ್ಯಕ್ಷರು ಮತ್ತು ಸದಸ್ಯರ ಸೇವಾ ಷರತ್ತುಗಳು) ನಿಯಮಗಳು 2017 ಈ ಮೂಲಭೂತ ಅರ್ಹತೆಗಳನ್ನು ಮೀರಿದ ಯಾವುದೇ ಆಯ್ಕೆ ವಿಧಾನ ಅಥವಾ ಮಾನದಂಡಗಳನ್ನು ಸೂಚಿಸುವುದಿಲ್ಲ. ಹೀಗಾಗಿ, ಆಯ್ಕೆ ವಿಧಾನ ಅಥವಾ ಮಾರ್ಗಸೂಚಿಗಳ ಸಂಪೂರ್ಣ ಅನುಪಸ್ಥಿತಿಯಿಂದಾಗಿ ಇಡೀ ಪ್ರಕ್ರಿಯೆಯು ಏಕಪಕ್ಷೀಯವಾಗುತ್ತದೆ ಮತ್ತು ಭಾರತದ ಸಂವಿಧಾನದ 14 ಮತ್ತು 16ನೇ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಲಯದ ಮೊರೆ ಹೋಗಿದ್ದರು. 

Attachment
PDF
Devanand Puttappa Nayak Vs State of Karnataka
Preview
Kannada Bar & Bench
kannada.barandbench.com