ಪತಂಜಲಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು: ಜಾಹೀರಾತುದಾರರಿಗೆ ಸ್ವಯಂ ಘೋಷಣೆ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಕೇಂದ್ರ

ಜೂನ್ 18, 2024 ರಂದು ಅಥವಾ ನಂತರ ಪ್ರಕಟವಾದ ಜಾಹೀರಾತುಗಳನ್ನು ಸ್ವಯಂ-ಪ್ರಮಾಣೀಕರಣಗೊಳಿಸುವ ಅಗತ್ಯವಿದೆ.
ಪತಂಜಲಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು: ಜಾಹೀರಾತುದಾರರಿಗೆ ಸ್ವಯಂ ಘೋಷಣೆ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಕೇಂದ್ರ
Misleading ads

ಪತಂಜಲಿ ಹಾದಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಎಲ್ಲಾ ಜಾಹೀರಾತುದಾರರು 'ಸ್ವಯಂ ಘೋಷಣೆ ಪ್ರಮಾಣಪತ್ರ' ಸಲ್ಲಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ನಿರ್ದೇಶನ ನೀಡಿದೆ.

ಸಚಿವಾಲಯ ಟಿವಿ ಮತ್ತು ರೇಡಿಯೋ ಜಾಹೀರಾತುಗಳಿಗಾಗಿ ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್‌ನಲ್ಲಿ ಮತ್ತು ಮುದ್ರಣ ಮತ್ತು ಡಿಜಿಟಲ್ ಜಾಹೀರಾತುಗಳಿಗಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪೋರ್ಟಲ್‌ನಲ್ಲಿ ಇದಕ್ಕಾಗಿ ಹೊಸ ವಿಭಾಗವನ್ನು ತೆರೆಯಲಾಗಿದೆ ಎಂದು ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ ತಿಳಿಸಿದೆ.

ಜಾಹೀರಾತುದಾರ/ಜಾಹೀರಾತು ಏಜೆನ್ಸಿಯ ಅಧಿಕೃತ ಪ್ರತಿನಿಧಿ ಸಹಿ ಮಾಡಿರುವ ಪ್ರಮಾಣಪತ್ರವನ್ನು ಈ ಪೋರ್ಟಲ್‌ಗಳ ಮೂಲಕ ಸಲ್ಲಿಸಬೇಕಾಗುತ್ತದೆ.

ಮಾನ್ಯವಾದ ಸ್ವಯಂ ಘೋಷಣಾ ಪ್ರಮಾಣಪತ್ರವಿಲ್ಲದೆ ಟಿವಿ, ಮುದ್ರಣ ಮಾಧ್ಯಮ ಅಥವಾ ಅಂತರ್ಜಾಲದಲ್ಲಿ ಯಾವುದೇ ಜಾಹೀರಾತು ಪ್ರಸಾರ ಅಥವಾ ಪ್ರಕಟ ಮಾಡಲು ಅನುಮತಿ ಇಲ್ಲ.  

ಆದರೆ ಈಗಿನ ಜಾಹೀರಾತುಗಳಿಗೆ ಸ್ವಯಂ ಪ್ರಮಾಣೀಕರಣದ ಅಗತ್ಯವಿಲ್ಲ ಎಂದು ಪತ್ರಿಕಾ ಪ್ರಕಟಣೆ ಸ್ಪಷ್ಟಪಡಿಸಿದೆ.

ಪತಂಜಲಿ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳು ಕೆಲವು ಆನ್‌ಲೈನ್ ವೇದಿಕೆಗಳಲ್ಲಿ ಈಗಲೂ ಲಭ್ಯವಿವೆ ಎಂದು ಮೇ 7 ರಂದು, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತ್ತು.

ಯಾವುದೇ ಜಾಹೀರಾತನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಎಲ್ಲಾ ಜಾಹೀರಾತುದಾರರು/ಜಾಹೀರಾತು ಏಜೆನ್ಸಿಗಳು ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತ್ತು.

"ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನವು ಪಾರದರ್ಶಕತೆ, ಗ್ರಾಹಕ ರಕ್ಷಣೆ ಮತ್ತು ಜವಾಬ್ದಾರಿಯುತ ಜಾಹೀರಾತು ಪ್ರಕಟಿಸುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇರಿಸಿದ ಹೆಜ್ಜೆಯಾಗಿದೆ. ಎಲ್ಲಾ ಜಾಹೀರಾತುದಾರರು, ಪ್ರಸಾರಕರು ಪ್ರಕಾಶಕರು ಈ ನಿರ್ದೇಶನವನ್ನು ಶ್ರದ್ಧೆಯಿಂದ ಅನುಸರಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒತ್ತಾಯಿಸುತ್ತದೆ" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Kannada Bar & Bench
kannada.barandbench.com