ಇ- ಮಾಧ್ಯಮಕ್ಕೆ ಸ್ವಯಂ ನಿಯಂತ್ರಣ ಸಾಧ್ಯವಾಗದು; ನಿಯಂತ್ರಣ ಸಂಸ್ಥೆ ಅಗತ್ಯವಿದೆ: ನ್ಯಾ. ಬಿ ವಿ ನಾಗರತ್ನ

ಸುಳ್ಳು ಸುದ್ದಿ, ಪೀತ ಪತ್ರಿಕೋದ್ಯಮ ಹಾಗೂ ಮಾಧ್ಯಮಗಳಿಂದ ಭೀತಿ ಸೃಷ್ಟಿಯ ಅಪಾಯಗಳ ಬಗ್ಗೆಯೂ ನ್ಯಾ. ನಾಗರತ್ನ ಪ್ರಸ್ತಾಪಿಸಿದರು.
Justice BV Nagarathna
Justice BV Nagarathna
Published on

ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಸ್ವಯಂ ನಿಯಂತ್ರಣ ಎಂಬುದು ನಿಷ್ಪರಿಣಾಮಕಾರಿಯಾಗಿರವುದು ಸಾಬೀತಾಗಿದೆ. ಹೀಗಾಗಿ‌ ಅವುಗಳಿಗೆ ಕಡಿವಾಣ ಹಾಕುವಂತಹ ನಿಯಂತ್ರಣ ಸಂಸ್ಥೆಯೊಂದರ ಅಗತ್ಯವಿದೆ ಎಂಸು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಶನಿವಾರ ಹೇಳಿದರು.

ಇಂತಹ ಸಂಸ್ಥೆ ಪತ್ರಿಕಾ ಸ್ತಾತಂತ್ರ್ಯವನ್ನು ಹತ್ತಿಕ್ಕದೆಯೇ ಮಾಧ್ಯಮಗಳ ವಿರುದ್ಧದ ದೂರುಗಳನ್ನು ಆಲಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಂಗ್ಲ ದೈನಿಕ ಬ್ಯುಸಿನೆಸ್ ಸ್ಟ್ಯಾಂಡರ್ಡ್‌ ಸೀಮಾ ನಜರೆತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು 'ಮುಕ್ತ ಮತ್ತು ಸಮತೋಲಿತ ಮಾಧ್ಯಮ: ಪ್ರಜಾಪ್ರಭುತ್ವದ ಕಾವಲುಗಾರ' ಎಂಬ ವಿಷಯದ ಕುರಿತು ಮಾತನಾಡಿದರು.

ನ್ಯಾ. ನಾಗರತ್ನ ಅವರ ಭಾಷಣದ ಪ್ರಮುಖಾಂಶಗಳು

  • ಪತ್ರಿಕೆಗಳನ್ನು ನಿಯಂತ್ರಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಇದೆ ಆದರೆ ಸುದ್ದಿ ವಾಹಿನಿಗಳು ಸ್ವಯಂನಿಯಂತ್ರಣ ವ್ಯವಸ್ಥೆ ಇದೆ. ಆದರೆ ಸ್ವಇಚ್ಛೆಯಿಂದ ಅಂತಹ ನಿಯಂತ್ರಣದ ಭಾಗವಾಗಿರುವವರನ್ನು ಮಾತ್ರ ಪ್ರತಿಬಂಧಿಸುವುದರಿಂದ ಸ್ವಯಂ ನಿಯಂತ್ರಣ ಸಮರ್ಪಕ ಪರಿಹಾರವಲ್ಲ.

  • ಮಾಧ್ಯಮ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಲು ನಿಯಂತ್ರಣ ಸಂಸ್ಥೆ ಇರಬೇಕು. ಆದರೆ ಅಂತಹ ಸಂಸ್ಥೆ ಪತ್ರಿಕಾ ಸಂಸ್ಥೆಯನ್ನು ನಿಯಂತ್ರಿಸುವ ಸಾಧನವಾಗಬಾರದು.

  • ಸ್ವಯಂ ನಿಯಂತ್ರಣ ಜಾರಿಯಾಗದಿರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಸ್ವಯಂ ನಿಯಂತ್ರಣ ಎಂಬುದು ಸ್ವಯಂ ನಿಯಂತ್ರಣದ ಭಾಗವಾಗಲು ಅಥವಾ ಅದರ ವ್ಯಾಪ್ತಿಗೆ ಒಳಗಾಗಲು ಸಿದ್ಧರಿರುವ ಪ್ರಸಾರಕರನ್ನು ಮಾತ್ರ ನಿರ್ಬಂಧಿಸುತ್ತದೆ. ಸ್ವ- ನಿಯಂತ್ರಣ ಸಂಸ್ಥೆಗಳಿಗೆ ಸ್ವಯಂ ನಿಯಂತ್ರಣವನ್ನು ಜಾರಿಗೆ ತರುವುದು ಒಂದು ಸವಾಲು. ಎರಡನೆಯ ಅಂಶ, ಹೊಸ ತಂತ್ರಜ್ಞಾನ ಯಾರು ಬೇಕಾದರೂ ಬರೆಯಲು ಮತ್ತು ಬರೆದದ್ದನ್ನು ಹಂಚಲು ಲಕ್ಷಗಟ್ಟಲೆ ಮಂದಿಗೆ ಅನುವು ಮಾಡಿಕೊಡುತ್ತದೆ.

  • ಆದ್ದರಿಂದ ಹೊಸ ಯುಗದ 'ಪತ್ರಿಕೋದ್ಯಮ'ವನ್ನು ನಿರ್ಬಂಧಿಸುವ ಕೆಲ ಬಗೆಯ ನಿಯಂತ್ರಣದ ಅಗತ್ಯವಿದೆ.

  • ಸರ್ಕಾರದ ಮೇಲೆ ಮುಗಿಬೀಳುವುದಷ್ಟೇ ಮಾಧ್ಯಮಗಳ ಗುರಿಯಾಗಬಾರದು ಬದಲಿಗೆ ರಚನಾತ್ಮಕ ವಿಮರ್ಶೆಯತ್ತ ಅವರು ಗಮನ ಹರಿಸಬೇಕು.

  • ಸುಳ್ಳು ಸುದ್ದಿ, ಪೀತ ಪತ್ರಿಕೋದ್ಯಮ ಹಾಗೂ ಮಾಧ್ಯಮಗಳಿಂದ ಭೀತಿ ಸೃಷ್ಟಿಯಾಗುವಂತಹ ಅಪಾಯಗಳು ಇವೆ.

  • ಸುಳ್ಳು ಸುದ್ದಿ ಲಕ್ಷಾಂತರ ಜನರನ್ನು ಒಮ್ಮೆಗೇ ದಿಕ್ಕುತಪ್ಪಿಸಬಹುದಾಗಿದ್ದು ಇದು ನಮ್ಮ ಅಸ್ತಿತ್ವಕ್ಕೆ ಬುನಾದಿ ಹಾಕುವ ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಿಗೆ ವ್ಯತಿರಿಕ್ತವಾದುದದಾಗಿದೆ.

  • ಒಂದು ದೇಶ  ಪ್ರಜಾಸತ್ತಾತ್ಮಕವಾಗಿ ಉಳಿಯಬೇಕಾದರೆ ಮಾಧ್ಯಮಗಳು ನಿಜವಾದ ಅರ್ಥದಲ್ಲಿ ಮುಕ್ತವಾಗಿರಬೇಕು.

Kannada Bar & Bench
kannada.barandbench.com