ಕಾರಿನ ಎಂಜಿನ್ ಸೀಜ್ ಆಗುತ್ತದೆ ಎನ್ನುವ ಸಂದರ್ಭದಲ್ಲಿ ಗ್ರಾಹಕರೊಬ್ಬರಿಗೆ ತಪ್ಪು ಮಾಹಿತಿ ನೀಡಿ ಮಾರಾಟ ಮಾಡಿದ್ದ ಆರೆಂಜ್ ಕಾರ್ಸ್ ಮಾಲೀಕರಿಗೆ ₹30 ಸಾವಿರ ದಂಡ ವಿಧಿಸಿರುವ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಯು ಬಾಧಿತರಿಗೆ ಅದನ್ನು ಪರಿಹಾರದ ರೂಪದಲ್ಲಿ ಪಾವತಿಸುವಂತೆ ನಿರ್ದೇಶಿಸಿದೆ.
ಬೆಂಗಳೂರಿನ ಎನ್ ಮಂಜುಳಾ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾದ ಎಂ ಎಸ್ ರಾಮಚಂದ್ರ, ಸದಸ್ಯರಾದ ಎಚ್ ಎನ್ ಶ್ರೀನಿಧಿ ಮತ್ತು ನಂದಿನಿ ಎಚ್. ಕುಂಬಾರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ಮಾಡಿದೆ.
ಕಾರು ಖರೀದಿ ಮಾಡಿದ್ದ ಸುಮಾರು ₹3.40 ಲಕ್ಷ ಹಿಂತಿರುಗಿಸುವುದರ ಜೊತೆಗೆ, ₹30 ಸಾವಿರ (ಮಾನಸಿಕ ಹಿಂಸೆ ಅನುಭವಿಸಿದ್ದಕ್ಕೆ ₹20 ಸಾವಿರ, ₹10 ಸಾವಿರ ದಂಡ) ಪರಿಹಾರಕ್ಕೆ ಆಯೋಗವು ನಿರ್ದೇಶಿಸಿದೆ.
ಪ್ರಕರಣದಲ್ಲಿ ಪ್ರತಿವಾದಿಯಾದ ಆರೆಂಜ್ ಕಾರ್ಸ್‌ಗೆ ನೋಟಿಸ್ ನೀಡಲಾಗಿದೆ. ಅದಾಗ್ಯೂ ಅವರು ಆಕ್ಷೇಪಣೆ ಸಲ್ಲಿಸಿಲ್ಲ. ಆಕ್ಷೇಪಣೆ ಸಲ್ಲಿಸಿಲ್ಲ ಎಂದರೆ ಆರೋಪ ಒಪ್ಪಿಕೊಂಡಂತೆ ಎಂಬುದಾಗಿ ರಾಷ್ಟ್ರೀಯ ಗ್ರಾಹಕರ ಪರಿಹಾರ ವೇದಿಕೆಯು ಕೋಟಕ್ ಮಹೀಂದ್ರ ಓಲ್ಡ್ ಮೂಚ್ಯುವಲ್ ವರ್ಸಸ್ ಡಾ.ನಿಶಿ ಗುಪ್ತ ಪ್ರಕರಣದಲ್ಲಿ ತಿಳಿಸಿದೆ. ಆದ್ದರಿಂದ, ಪ್ರತಿವಾದಿ ಆಕ್ಷೇಪ ಸಲ್ಲಿಸಿಲ್ಲವಾದ್ದರಿಂದ ಆದೇಶ ಮಾಡುತ್ತಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ದೂರುದಾರರಾದ ಮಂಜುಳ ಆರೆಂಜ್ ಕಾರ್ಸ್ ಮಾಲೀಕರಾದ ನವೀನ್ ಗೌಡ ಅವರಿಂದ 2018ರ ಮಾಡೆಲ್‌ನ ಹ್ಯೂಂಡೈ ಮೋಟೊ ಕ್ಯಾಬ್ ಕಾರನ್ನು 2022ರ ಜನವರಿ 10ರಂದು ₹3.60 ಲಕ್ಷ ಪಾವತಿಸಿ ಖರೀದಿಸಿದ್ದರು. ₹20 ಸಾವಿರ ಬಾಕಿ ಉಳಿಸಿಕೊಂಡಿದ್ದು, ದಾಖಲೆ ಪಡೆದ ಬಳಿಕ ಬಾಕಿ ಮೊತ್ತ ಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೆ, ದಾಖಲೆ ಹಸ್ತಾಂತರ ಮಾಡುವುದಕ್ಕೆ ನವೀನ್ ಗೌಡ ವಿಳಂಬ ನೀತಿ ಅನುಸರಿಸಿದ್ದರು.
ಕಾರು ಅತ್ಯುತ್ತಮವಾಗಿದ್ದು, ಆರು ತಿಂಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, 6 ಸಾವಿರ ಕಿ ಮೀ ಚಲಾಯಿಸಿದ ಬಳಿಕ 2022ರ ಜೂನ್ 7ರಂದು ಕಾರು ಸ್ಥಗಿತಗೊಂಡಿತ್ತು. ಪರಿಶೀಲಿಸಿದಾಗ ಎಂಜಿನ್ ಸೀಜ್ ಆಗಿದೆ, ಸರಿ ಪಡಿಸುವುದಕ್ಕೆ ₹90 ಸಾವಿರ ಖರ್ಚಾಗಲಿದೆ ಎಂದು ಮೆಕ್ಯಾನಿಕ್ ತಿಳಿಸಿದ್ದರು. ಅದಾಗ್ಯೂ, ಉಳಿಕೆ ₹20 ಸಾವಿರ ಪಾವತಿಸುವುದಾಗಿ ತಿಳಿಸಿದರೂ ನವೀನ್ ಗೌಡ ದಾಖಲೆಗಳನ್ನು ಹಸ್ತಾಂತರಿಸಿರಲಿಲ್ಲ.
ಅಂತಿಮವಾಗಿ ತಮ್ಮ ಕಾರು ಪಡೆದು ಹಣ ಹಿಂದಿರುಗಿಸುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಲೀಗಲ್‌ನೋಟಿಸ್ ಜಾರಿ ಮಾಡಿದ್ದರೂ, ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸಂಪೂರ್ಣ ಮೊತ್ತ ಹಿಂದಿರುಗಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಗ್ರಾಹಕರ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗವು ಹಲವು ಬಾರಿ ನೋಟಿಸ್ ಜಾರಿ ಮಾಡಿತ್ತು. ವಾಟ್ಸಪ್ ಮೂಲಕವೂ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ದೊರಯದ ಹಿನ್ನೆಲೆಯಲ್ಲಿ ಏಕಪಕ್ಷೀಯ ಆದೇಶ ಮಾಡಿದೆ.