ಸರಿಯಾಗಿ ನಡೆಸಿಕೊಳ್ಳದ ಹೊರ ರಾಜ್ಯಗಳಿಂದ ಬಂದಿರುವ ನ್ಯಾಯಮೂರ್ತಿಗಳಿಗೆ ಸಂದೇಶ ರವಾನಿಸಿ: ನ್ಯಾ. ದೀಕ್ಷಿತ್‌ ಕರೆ

“ಇಲ್ಲಿಗೆ ಬಂದ ಅನೇಕ ಮಹನೀಯರು ಕನ್ನಡ ಭಾಷೆ ಕಲಿತು ಹೋಗಿದ್ದಾರೆ. ನ್ಯಾಯಮೂರ್ತಿಗಳು ಮಾತ್ರವಲ್ಲ, ಹೊರಗಿನಿಂದ ಬರುವ ವಕೀಲರೂ ಕನ್ನಡ ಕಲಿಯಬೇಕು” ಎಂದು ತಾಕೀತು ಮಾಡಿದ ನ್ಯಾ. ಕೃಷ್ಣ ದೀಕ್ಷಿತ್.
Justice Krishna Dixit
Justice Krishna Dixit
Published on

“ಕರ್ನಾಟಕ ಹೈಕೋರ್ಟ್‌ಗೆ ಹೊರರಾಜ್ಯದಿಂದ ವರ್ಗಾವಣೆಯಾಗಿ ಬಂದಿರುವ ಯಾವ ನ್ಯಾಯಮೂರ್ತಿಗಳು ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೋ ಅಂತಹ ನ್ಯಾಯಮೂರ್ತಿಗಳಿಗೆ ನೀವು ಸರಿಯಾದ ಸಂದೇಶ ರವಾನಿಸಬೇಕು” ಎಂದು ಒಡಿಶಾ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ವಕೀಲರನ್ನು ಕುರಿತು ಹೇಳಿದರು.

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ ಆವರಣದಲ್ಲಿ ಗುರುವಾರ ಬೆಂಗಳೂರು ವಕೀಲರ ಸಂಘ (ಎಎಬಿ) ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿರು.

“ಬೇರೆ ರಾಜ್ಯಗಳಿಂದ ಕರ್ನಾಟಕ ಹೈಕೋರ್ಟ್‌ಗೆ ಬಂದಿರುವ ಕೆಲವು ನ್ಯಾಯಮೂರ್ತಿಗಳು ಕೋರ್ಟ್‌ ಕಲಾಪದಲ್ಲಿ ವಕೀಲರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಈ ನ್ಯಾಯಮೂರ್ತಿಗಳ ಮುಂದೆ ಹೋಗಿ ನಾವು ಹೇಗೆ ವಾದ ಮಾಡಬೇಕು ಎಂದು ರಾಜ್ಯದ ವಕೀಲರು ಅಳಕುತ್ತಿದ್ದಾರೆ ಎಂಬ ಮಾತು ನನ್ನ ಕಿವಿಗೆ ಬಿದ್ದಿದೆ. ಇದು ತರವಲ್ಲ” ಎಂದು ಹೇಳಿದರು.

“ಹೊರಗಿನಿಂದ ಬಂದ ನ್ಯಾಯಮೂರ್ತಿಗಳು ಎಂದರೆ ಅವರೇನೂ ಪಾಕಿಸ್ಥಾನ, ಅಫ್ಘಾನಿಸ್ಥಾನದಿಂದ ಬಂದಿರುವುದಿಲ್ಲ. ಭಾರತದ ಮತ್ತೊಂದು ಭಾಗದಿಂದಲೇ ಇಲ್ಲಿಗೆ ಬಂದಿರುತ್ತಾರೆ. ಇಲ್ಲಿಗೆ ಬಂದ ಮೇಲೆ ಅವರು ಇಲ್ಲಿಯವರಾಗೇ ನಡೆದುಕೊಳ್ಳಬೇಕು” ಎಂದು ನ್ಯಾ. ದೀಕ್ಷಿತ್‌ ಹೇಳಿದರು.

“ಕರ್ನಾಟಕ ಹೈಕೋರ್ಟ್‌ಗೆ ಬರುವ ನ್ಯಾಯಮೂರ್ತಿಗಳು ತಾವು ಕನ್ನಡದ ನೆಲದಲ್ಲಿ ಇರುತ್ತೇವೆ ಎಂಬುದನ್ನು ಮರೆಯಬಾರದು; ನಿಮಗೆಲ್ಲಾ ಹಸಿವಾದರೆ ಇಲ್ಲಿನ ಅಕ್ಕಿ, ಗೋಧಿ, ಕಾಳು–ಕಡಿ ಬೇಕು. ಬಾಯಾರಿಕೆಯಾದರೆ ಕುಡಿಯಲು ಕಾವೇರಿ ನೀರು ಬೇಕು... ಇವೆಲ್ಲಾ ಬೇಕಾದ ಮೇಲೆ ಕನ್ನಡದ ಭಾಷೆ ಬೇಡ ಅಂದರೆ ಹೇಗೆ?’ ಎಂದು ಪ್ರಶ್ನಿಸಿದರು.

“ಇಲ್ಲಿಗೆ ಬಂದ ಅನೇಕ ಮಹನೀಯರು ಕನ್ನಡ ಭಾಷೆ ಕಲಿತು ಹೋಗಿದ್ದಾರೆ. ನ್ಯಾಯಮೂರ್ತಿಗಳು ಮಾತ್ರವಲ್ಲ, ಹೊರಗಿನಿಂದ ಬರುವ ವಕೀಲರೂ ಕನ್ನಡ ಕಲಿಯಬೇಕು” ಎಂದು ತಾಕೀತು ಮಾಡಿದರು.

“ಯಾವುದೇ ನ್ಯಾಯಮೂರ್ತಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಅಲ್ಲಿನ ಭಾಷೆಯನ್ನು ಗ್ರಹಿಸಲೇಬೇಕು. ನಾನು ಕರ್ನಾಟಕ ಹೈಕೋರ್ಟ್‌ನಿಂದ ಒಡಿಶಾ ಹೈಕೋರ್ಟ್‌ಗೆ ವರ್ಗವಾಗಿ ಹೋದ ಮೇಲೆ ಒರಿಯಾ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಫಲವಾಗಿದ್ದೇನೆ. ನನಗೀಗ ಒರಿಯಾ ಸಂಭಾಷಣೆ ಸಂಪೂರ್ಣ ಅರ್ಥವಾಗುತ್ತದೆ” ಎಂದರು.

“ನ್ಯಾಯಮೂರ್ತಿಗಳು ಮತ್ತು ವಕೀಲರು ಎಂದರೆ ಅದು ಒಂದು ಕುಟುಂಬ ಇದ್ದಂತೆ. ಹೊರಗಿನಿಂದ ಬಂದವರು ಎಂಬುದು ಒಂದು ಪ್ರಶ್ನೆಯೇ ಆಗಬಾರದು. ಅವರೆಲ್ಲಾ ಸ್ಥಳೀಯರಾಗೇ ನಡೆದುಕೊಳ್ಳಬೇಕು. ಕೋರ್ಟಿಗೆ ಹೋಗುವಾಗಲೇ ನಾನು ಹೋಗುವ ಕೋರ್ಟ್‌ ಹಾಲ್‌ ಇದಲ್ಲ ಎಂಬ ಭಾವನೆ ವಕೀಲರಿಗೆ ಬರಕೂಡದು. ಇಂಥವರ ಮುಂದೆ ಹೋಗಿ ವಾದ ಮಾಡಬಲ್ಲೆ ಎಂಬಂತಹ ಪ್ರೀತಿ ಅಡಗಿರಬೇಕು. ವಕೀಲರು ಯಾವುದೇ ಪೀಠದ ಮುಂದೆ ಒತ್ತಡದಲ್ಲಿ ಹೋಗಿ ವಾದ ಮಂಡಿಸುವಂತಹ ಸ್ಥಿತಿ ಬರಬಾರದು. ಇದರಿಂದ ಕಕ್ಷಿದಾರರಿಗೆ ಅನ್ಯಾಯವಾಗುತ್ತದೆ” ಎಂದರು.

“ತೆರೆದ ನ್ಯಾಯಾಲಯಗಳ ಕಲಾಪದಲ್ಲಿ ವಕೀಲರು ಹೇಳೋದಕ್ಕಿಂತ ಮೊದಲೇ ನ್ಯಾಯಮೂರ್ತಿಗಳು ಮುರಕೊಂಡು ಮೈಮೇಲೆ ಬಿದ್ದರೆ ಅವರು ಹೇಗೆ ತಾನೆ ವಾದ ಮಾಡಿಯಾರು? ರೈಟೊ–ರಾಂಗೋ ವಕೀಲರ ವಾದವನ್ನು ನ್ಯಾಯಮೂರ್ತಿಗಳು ಕೇಳುವಂತಾಗಬೇಕು. ಅಂತಿಮವಾಗಿ ಅವರು ಏನಾದರೂ ತೀರ್ಪು ಕೊಡಲಿ. ಅಷ್ಟಕ್ಕೂ, ಯಾವುದೇ ನ್ಯಾಯಮೂರ್ತಿ ತನ್ನ ತೀರ್ಪುಗಳನ್ನು ಸಿಟ್ಟು–ಸೆಡವಿನಿಂದ ಕೊಡುವಂತಾಗಬಾರದು. ಅವು ಕಾನೂನು, ಭಾಷೆ ಮತ್ತು ನ್ಯಾಯ ನೀಡಿಕೆಗಳ ಸಂಗಮವಾಗಿರಬೇಕು” ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್‌ ವಿ ಪ್ರವೀಣ ಗೌಡ ಮತ್ತು ಸಂಘದ ಪದಾಧಿಕಾರಿಗಳು, ವಕೀಲರು ಹಾಜರಿದ್ದರು.

Kannada Bar & Bench
kannada.barandbench.com