1988ರ ಬೇನಾಮಿ ವ್ಯವಹಾರ (ನಿಷೇಧ) ಕಾಯಿದೆ ಮತ್ತು 2016ರ ತಿದ್ದುಪಡಿ ಕಾಯಿದೆಯ ಹಲವು ನಿಯಮಾವಳಿಗಳನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
2016ರ ತಿದ್ದುಪಡಿ ಕಾಯಿದೆಯ ಸೆಕ್ಷನ್ 5 ದಂಡನಾತ್ಮಕ ಸ್ವರೂಪ ಹೊಂದಿದ್ದು ಅದನ್ನು ಭವಿಷ್ಯವರ್ತಿಯಾಗಿ ಮಾತ್ರ ಅನ್ವಯಿಸಬಹುದೇ ಹೊರತು ಪೂರ್ವಾನ್ವಯವಾಗುವ ರೀತಿಯಲ್ಲಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಪರಿಣಾಮವಾಗಿ, ಸಂಬಂಧಪಟ್ಟ ಅಧಿಕಾರಿಗಳು 2016ರ ಕಾಯಿದೆ ಜಾರಿಗೆ ಬರುವ ಮೊದಲು ಅಂದರೆ ಅಕ್ಟೋಬರ್ 25, 2016 ರ ಮೊದಲಿನ ವಹಿವಾಟುಗಳಿಗೆ ಕ್ರಿಮಿನಲ್ ಮೊಕದ್ದಮೆ ಅಥವಾ ಮುಟ್ಟುಗೋಲು ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತಿಲ್ಲ ಅಥವಾ ಮುಂದುವರೆಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.
ಆದ್ದರಿಂದ, ಅಕ್ಟೋಬರ್ 2016ರ ಮೊದಲಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಪ್ರಾರಂಭಿಸಲಾದ ಎಲ್ಲಾ ಕಾನೂನು ಕ್ರಮಗಳು ಅಥವಾ ಜಪ್ತಿ ಪ್ರಕ್ರಿಯೆಗಳನ್ನು ನ್ಯಾಯಾಲಯವು ರದ್ದುಗೊಳಿಸಿತು. 1988ರ ತಿದ್ದುಪಡಿ ಮಾಡದ ಕಾಯಿದೆಯ ಸೆಕ್ಷನ್ 3(2) ಸ್ಪಷ್ಟವಾಗಿ ಮನಸೋಇಚ್ಛೆಯಿಂದ ಕೂಡಿರುವುದಕ್ಕಾಗಿ ಅಸಾಂವಿಧಾನಿಕವಾಗಿದೆ. ಎಂದು ಕೂಡ ಪೀಠ ಅಭಿಪ್ರಾಯಪಟ್ಟಿದೆ. ಸೆಕ್ಷನ್ 3(2) ಬೇನಾಮಿ ವಹಿವಾಟುಗಳನ್ನು ಅಪರಾಧವಾಗಿ ಪರಿಗಣಿಸಿ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುತ್ತದೆ.
ಬೇನಾಮಿ ವ್ಯವಹಾರ (ನಿಷೇಧ) ಕಾಯಿದೆ- 1988ಕ್ಕೆ 2016ರಲ್ಲಿ ಮಾಡಲಾದ ತಿದ್ದುಪಡಿ ಸ್ವಭಾವತಃ ಭವಿಷ್ಯವರ್ತಿ ಎಂದು ಕಲ್ಕತ್ತಾ ಹೈಕೋರ್ಟ್ ಡಿಸೆಂಬರ್ 2019ರಲ್ಲಿ, ಅಭಿಪ್ರಾಯಪಟ್ಟಿತ್ತು. ಕಾಯಿದೆಗೆ ಮಾಡಲಾದ ಈ ತಿದ್ದುಪಡಿ ಕಾಯಿದೆಯನ್ನು ಮರುನಾಮಕರಣ ಮಾಡುವುದರ ಜೊತೆಗೆ ಬೇನಾಮಿ ಆಸ್ತಿ ಜಪ್ತಿ, ಮುಟ್ಟುಗೋಲು ಮತ್ತು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿತ್ತು. ಬೇನಾಮಿ ಆಸ್ತಿ ವಹಿವಾಟಿಗೆ ಸಂಬಂಧಿಸಿದ ಅಪರಾಧಗಳಿಗೆ ಹೊಸ ಕಾಯಿದೆಯಡಿ ಶಿಕ್ಷೆಗೆ ತಿದ್ದುಪಡಿಯನ್ನು ಸಹ ಒದಗಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.