ಅರ್ನಾಬ್ ಪ್ರಕರಣಗಳ ತುರ್ತು ವಿಚಾರಣೆಗೆ ವಕೀಲ ದುಶ್ಯಂತ್‌ ದವೆ ಆಕ್ಷೇಪ - ಹಾಗೇನೂ ಇಲ್ಲ ಎಂದ ಗೋಸ್ವಾಮಿ ಪತ್ನಿ

ಪ್ರಕರಣವೊಂದರಲ್ಲಿ ಹಿರಿಯ ವಕೀಲರೂ ಆದ ಪಿ ಚಿದಂಬರಂ ಅವರಿಗೆ ಕೂಡ ಇಂತಹ ಅವಕಾಶ ದೊರೆತಿರಲಿಲ್ಲ ಎಂದು ವಕೀಲ ದವೆ ತಿಳಿಸಿದ್ದಾರೆ. ಮತ್ತೊಂದೆಡೆ ದವೆ ಅವರ ನಿಲುವು ಪೂರ್ವಾಗ್ರಹದಿಂದ ಕೂಡಿದೆ ಎಂದು ಗೋಸ್ವಾಮಿ ಪತ್ನಿ ಸಮ್ಯಬ್ರತಾ ರೇ ಹೇಳಿದ್ದಾರೆ.
ಅರ್ನಾಬ್ ಪ್ರಕರಣಗಳ ತುರ್ತು ವಿಚಾರಣೆಗೆ ವಕೀಲ ದುಶ್ಯಂತ್‌ ದವೆ ಆಕ್ಷೇಪ - ಹಾಗೇನೂ ಇಲ್ಲ ಎಂದ ಗೋಸ್ವಾಮಿ ಪತ್ನಿ

ಒಳಾಂಗಣ ವಿನ್ಯಾಸಕ ಅನ್ವಯ್‌ ನಾಯಕ್ ಮತ್ತವರ ತಾಯಿ ಆತ್ಮಹತ್ಯೆ ಪ್ರಕರಣದಲ್ಲಿ ಜಾಮೀನು ಕೋರಿ ಅರ್ನಾಬ್‌ ಗೋಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಮರುದಿನವೇ ಮುಂದಾದ ಸುಪ್ರೀಂಕೋರ್ಟ್‌ ನಿಲುವನ್ನು ಪ್ರಶ್ನಿಸಿ ಹಿರಿಯ ವಕೀಲ ದುಶ್ಯಂತ್‌ ದವೆ ಅವರು ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಇದಾಗಿ ಕೆಲ ಗಂಟೆಗಳಲ್ಲೇ ಅರ್ನಾಬ್‌ ಗೋಸ್ವಾಮಿ ಅವರ ಪತ್ನಿ ಕೂಡ ಸರ್ವೋಚ್ಚ ನ್ಯಾಯಾಲಯದ ಅದೇ ಅಧಿಕಾರಿಗೆ ಪತ್ರ ಬರೆದಿದ್ದು ದವೆ ಅವರ ವಿರುದ್ಧ ಕಿಡಿಕಾರಿದ್ದಾರೆ.

ಸುಪ್ರೀಂಕೋರ್ಟ್‌ ವಕೀಲರ ಪರಿಷತ್ತಿನ ಅಧ್ಯಕ್ಷರೂ ಆಗಿರುವ ದವೆ ಅವರು ಪ್ರಕರಣಕ್ಕೆ ಆದ್ಯತೆ ನೀಡಿರುವ ಕುರಿತಂತೆ ಪ್ರತಿಭಟನೆ ಸೂಚಿಸಿದ್ದು ʼಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಂದ ವಿಶೇಷ ನಿರ್ದೇಶನವೇನಾದರೂ ಬಂದಿದೆಯೇ?ʼ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ʼಸಾವಿರಾರು ನಾಗರಿಕರು ಜೈಲಿನಲ್ಲಿಯೇ ಉಳಿದಿದ್ದು ಅಂತಹವರ ಪ್ರಕರಣಗಳು ವಾರ, ತಿಂಗಳುಗಳು ಕಳೆದರೂ ವಿಚಾರಣೆಗೆ ಬರುತ್ತಿಲ್ಲʼ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Also Read
ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನ: ಇಲ್ಲಿದೆ ಪ್ರಕರಣದ ಹಿನ್ನೆಲೆ

ದವೆ ಅವರ ಆಕ್ಷೇಪಗಳು:

  • ಸಾವಿರಾರು ನಾಗರಿಕರು ಜೈಲುಗಳಲ್ಲೇ ಇದ್ದು ವಾರಗಳು, ತಿಂಗಳುಗಳಷ್ಟು ದೀರ್ಘಾವಧಿಯಾದರೂ ಅವರ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ.

  • ಮುಖ್ಯ ನ್ಯಾಯಮೂರ್ತಿಗಳ ನಿರ್ದಿಷ್ಟ ಆದೇಶ ಇಲ್ಲದೆ ಇಂತಹ ಪ್ರಕರಣಗಳ ತುರ್ತು ವಿಚಾರಣೆ ನಡೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅಥವಾ ರಿಜಿಸ್ಟ್ರಾರ್‌ ಅವರೇ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆಯೇ?

  • ಐಎನ್‌ಎಕ್ಸ್‌ ಮಾಧ್ಯಮ ಪ್ರಕರಣದಲ್ಲಿ ಸ್ವತಃ ಹಿರಿಯ ವಕೀಲರೂ ಆದ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ಕೂಡ ಇಂತಹ ಅವಕಾಶ ದೊರೆತಿರಲಿಲ್ಲ.

  • ವ್ಯವಸ್ಥೆ ಕಂಪ್ಯೂಟರೀಕರಣಗೊಂಡಿದೆ ಮತ್ತು ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳುತ್ತಿರುವಾಗ ಈ ಆದ್ಯತೆ ಪಟ್ಟಿಗೆ ಅವಕಾಶ ದೊರೆತಿದ್ದು ಹೇಗೆ? ಎಲ್ಲಾ ನಾಗರಿಕರಿಗೆ ಮತ್ತು ಎಒಆರ್‌ಗಳಿಗೆ ನ್ಯಾಯಸಮ್ಮತವಾದ ವ್ಯವಸ್ಥೆ ಏಕೆ ಇರಬಾರದು?

  • ವೀಡಿಯೊ ಕಲಾಪಗಳಿಗಾಗಿ ಉತ್ತಮ ದೂರಸಂಪರ್ಕ ವ್ಯವಸ್ಥೆ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಇ ಸಮಿತಿಗೆ ನೀಡಿರುವ ಸಲಹೇ ಇನ್ನೂ ಬಾಕಿ ಇದೆ. ಮತ್ತೊಂದೆಡೆ ಫೈಬರ್‌ ಆಪ್ಟಿಕ್ಸ್‌ ವ್ಯವಸ್ಥೆ ಒದಗಿಸಲು ಇ ಸಮಿತಿಯನ್ನು ಸಂಪರ್ಕಿಸುವಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿಲಯನ್ಸ್‌ ಜಿಯೋಗೆ ನಿರ್ದೇಶನ ನೀಡುತ್ತಾರೆ. ಇದೊಂದು ಅಚ್ಚರಿಯೂ, ಆಘಾತಕಾರಿಯೂ ಆದ ಸಂಗತಿ.

  • ನ 10ರವರೆಗೆ ಪಟ್ಟಿಯಾಗಿರುವ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಯುವವರೆಗೆ ಅರ್ನಾಬ್‌ ಅವರ ಪ್ರಕರಣವನ್ನು ಕೈಗೆತ್ತಿಕೊಳ್ಳಬಾರದು.

ದವೆ ಅವರು ಪತ್ರ ಬರೆದ ಕೆಲ ಗಂಟೆಗಳಲ್ಲೇ ಸುಪ್ರೀಂಕೋರ್ಟ್‌ನ ಮಹಾ ಕಾರ್ಯದರ್ಶಿ ಅವರಿಗೆ ಅರ್ನಾಬ್‌ ಪತ್ನಿ ಸಮ್ಯಬ್ರತಾ ರೇ ಗೋಸ್ವಾಮಿ ಅವರು ಕೂಡ ಪತ್ರ ಬರೆದಿದ್ದು ತಮ್ಮ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ. ದವೆ ಅವರು ಗೋಸ್ವಾಮಿ ಅವರನ್ನೇ ಪ್ರತ್ಯೇಕಿಸಿ ಗುರಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼದವೆ ಅವರ ಪತ್ರವನ್ನು ಓದಿದಾಗ ಪಟ್ಟಭದ್ರ ಹಿತಾಸಕ್ತಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎಂದು ಆಘಾತಕ್ಕೊಳಗಾದೆʼ ಎಂದಿರುವ ಅವರು ಪತ್ರಕರ್ತ ವಿನೋದ್‌ ದುವಾ, ಪ್ರಶಾಂತ್‌ ಭೂಷಣ್‌ ಮತ್ತು ಸ್ವತಃ ದವೆ ಅವರು ಖುದ್ದು ವಾದ ಮಂಡಿಸಿದ್ದ ರೋಮಿಲಾ ಥಾಪರ್‌ ಪ್ರಕರಣಗಳಲ್ಲಿ ನ್ಯಾಯಾಲಯ ತುರ್ತು ವಿಚಾರಣೆ ನಡೆಸಿದ್ದನ್ನು ಉಲ್ಲೇಖಿಸಿದ್ದಾರೆ.

“ಭಯಾನಕ ರೀತಿಯಲ್ಲಿ ಈ ದೇಶದ ಅತ್ಯುನ್ನತ ನ್ಯಾಯಾಂಗ ಅಧಿಕಾರಿಗಳ ಮೇಲೆ ಪ್ರಭಾವ ಬೀರುವಂತಹ ಅಸಹನೀಯ ಅಪರೋಕ್ಷ ಆರೋಪಗಳನ್ನ ಮಾಡುವ ಮೂಲಕ ದವೆ ಅವರು ನ್ಯಾಯಾಂಗದ ಪ್ರತಿಷ್ಠೆ, ಘನತೆ, ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಿದ್ದಾರೆ. ನ್ಯಾಯದ ಮುಕ್ತ ಮತ್ತು ನ್ಯಾಯೋಚಿತ ಹಾದಿಗೆ ಪೂರ್ವಾಗ್ರಹದ ಅಡ್ಡಗಲ್ಲು ಹಾಕಿದ್ದಾರೆ” ಎಂಬರ್ಥದ ಅಭಿಪ್ರಾಯವನ್ನು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Kannada Bar & Bench
kannada.barandbench.com