ಸುಪ್ರೀಂ ಕೋರ್ಟ್‌ನ ಪ್ರಾದೇಶಿಕ ಪೀಠಗಳು ಸ್ಥಾಪನೆಯಾಗುವವರೆಗೆ ವರ್ಚುವಲ್ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆ ಮುಂದುವರೆಸುವಂತೆ ಹಿರಿಯ ನ್ಯಾಯವಾದಿ, ಡಿಎಂಕೆ ಸಂಸದ ಪಿ ವಿಲ್ಸನ್ ಸೋಮವಾರ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠದ ಮುಂದೆ ಅವರು ಈ ವಿಚಾರ ಪ್ರಸ್ತಾಪಿಸಿದರು. ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸಲು ಹಿಂದಿನಿಂದಲೂ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿದವರು ವಿಲ್ಸನ್.
2019ರಲ್ಲಿ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಇದರಿಂದಾಗಿ ಜನಸಂಖ್ಯೆ ಪ್ರಮಾಣ ಮತ್ತು ನ್ಯಾಯಾಧೀಶರುಗಳಿಗೆ ಇರುವ ಅಂತರ ಸುಧಾರಣೆಯಾಗುತ್ತದೆ ಎಂದು ಹೇಳಿದ್ದರು.
ಡಿಸೆಂಬರ್ 2020ರಲ್ಲಿ, ವಿಲ್ಸನ್ ಅವರು ಅಂದಿನ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದು ಈ ಸಂಬಂಧ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೆ ಜುಲೈ 2021ರಲ್ಲಿ ಅವರು ಖಾಸಗಿ ಮಸೂದೆ ಮಂಡಿಸಿದ್ದರು. ಈಗಿನ ಕಾನೂನು ಸಚಿವ ಕಿರೆನ್ ರಿಜಿಜು ಅವರಿಗೂ ಪತ್ರ ಬರೆದಿರುವ ಅವರು ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಬೇಕೆಂದು ಕೋರಿದ್ದರು.