
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದ ಸಂದರ್ಶನ ಪ್ರಾಧ್ಯಾಪಕರನ್ನಾಗಿ ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಮತ್ತು ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ಅವರು ಎರಡು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
ಯಾವುದೇ ಸಂಭಾವನೆ, ಟಿಎ/ಡಿಎ ಇತ್ಯಾದಿಯ ಫಲಾಪೇಕ್ಷೆ ಇಲ್ಲದೇ ಉಭಯ ವಕೀಲರು 2025-26, 2026-27ನೇ ಸಾಲಿನಲ್ಲಿ ಬೋಧನೆ ಮಾಡಲು ಸಮ್ಮತಿಸಿದ್ದಾರೆ ಎಂದು ಬೆಂಗಳೂರು ರಿಜಿಸ್ಟ್ರಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯ ಮತ್ತು ನ್ಯಾಯ ಮಂಡಳಿಗಳಲ್ಲಿ ಸುದೀರ್ಘವಾದ ಪ್ರಾಕ್ಟೀಸ್ ಅನುಭವವನ್ನು ಉಭಯ ವಕೀಲರು ಹೊಂದಿದ್ದಾರೆ. ಪ್ರಸನ್ನಕುಮಾರ್ ಮತ್ತು ಶ್ಯಾಮ್‌ಸುಂದರ್ ಅವರು ಹಲವು ಪ್ರಕರಣಗಳಲ್ಲಿ ವಿರುದ್ಧ ಧ್ರುವಗಳಲ್ಲಿ ನಿಂತು ವಾದಿಸಿದ್ದಾರೆ.
ಬೆಂಗಳೂರಿನ ವಿಶ್ವವಿದ್ಯಾಲಯ ಕಾನೂನು ಕಾಲೇಜಿನಲ್ಲಿ ಪ್ರಸನ್ನಕುಮಾರ್ ಅವರು ಬಿ.ಎ., ಎಲ್‌ಎಲ್‌ಬಿ ಪದವಿ ಪಡೆದಿದ್ದು, ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾಲಯದಲ್ಲಿ ಪರ್ಯಾಯ ವಿವಾದ ನಿರ್ಣಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ. 2001ರ ಆಗಸ್ಟ್ 25ರಂದು ವಕೀಲರಾಗಿ ನೋಂದಣಿ ಮಾಡಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಪಡೆದಿರುವ ಶ್ಯಾಮ್ ಸುಂದರ್ ಅವರು, 1997ರಲ್ಲಿ ವಕೀಲರಾಗಿ ನೋಂದಾಯಿಸಿದ್ದರು. 2022ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯ, ಕೆಇಟಿ ಕಾಲೇಜು ಮುಂತಾದ ಕಡೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಿಮಿನಲ್, ಸಿವಿಲ್, ಕಾರ್ಪೊರೇಟ್ ಸೇವೆ ಮತ್ತು ವೈವಾಹಿಕ ವಿವಾದಗಳಂಥ ಪ್ರಕರಣಗಳಲ್ಲಿ ಹಿಡಿತ ಹೊಂದಿದ್ದಾರೆ.