ಯುವ ವಕೀಲರು ಅನುಭವ ಪಡೆಯುವಂತಾಗಲು ಮತ್ತು ವಕೀಲ ಸಮುದಾಯ ಹೆಚ್ಚು ಬಲಶಾಲಿಯಾಗುವಂತಾಗಲು ಕಿರಿಯ ವಕೀಲರಿಗೆ ವಾದ ಮಂಡಿಸಲು ಹೆಚ್ಚಿನ ಅವಕಾಶ ನೀಡುವಂತೆ ಹಿರಿಯ ನ್ಯಾಯವಾದಿಗಳಿಗೆ ಗುಜರಾತ್ ಹೈಕೋರ್ಟ್ ಮಂಗಳವಾರ ಸಲಹೆ ನೀಡಿತು.
ತಮ್ಮ ಕಿರಿಯರಿಗೆ ನ್ಯಾಯಾಲಯದ ಮುಂದೆ ವಾದಿಸಲು ಬುಧವಾರದಿಂದ ಅವಕಾಶ ನೀಡುವಂತೆ ಕೆಲ ಹಿರಿಯ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಹೇಳಿತು.
"ಯುವ ವಕೀಲರನ್ನು ಬಲಿಷ್ಠಗೊಳಿಸುವ ಕಡೆಗೆ ನಮ್ಮ ಪ್ರಯತ್ನ ಇರಬೇಕು. ನಾವು ಇದನ್ನೆಲ್ಲ ಏಕೆ ಹೇಳುತ್ತಿದ್ದೇವೆ ಎಂದರೆ ಇಂದಿನ ಯುವ ವಕೀಲರು ಮುಂದಿನ 10 ವರ್ಷಗಳಲ್ಲಿ ಹಿರಿಯ ವಕೀಲರಾಗುತ್ತಾರೆ. ಅವರು ಈಗಿನಿಂದಲೇ ಕಲಿಯಬೇಕು. ಆದ್ದರಿಂದ ನಿಮ್ಮ ಕಿರಿಯರು ನಮ್ಮ ಮುಂದೆ ವಾದಿಸಲಿ" ಎಂದು ಪೀಠ ನುಡಿಯಿತು.
ಹಿರಿಯ ನ್ಯಾಯವಾದಿ ಶಾಲಿನ್ ಮೆಹ್ತಾ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಿರಿಯ ವಕೀಲೆಯೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಿ ಗುರುವಾರದವರೆಗೆ ಪ್ರಕರಣ ಮುಂದೂಡುವಂತೆ ಕೋರಿದರು. ಆಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಕಿರಿಯ ವಕೀಲರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಸಿಜೆಐ ಪೀಠದ ಮುಂದೆ ಪ್ರಕರಣವೊಂದನ್ನು ಮುಂದೂಡಲು ಕೋರುವುದಕ್ಕೆ ತಮಗೆ ಅವಕಾಶ ನೀಡಲಾಯಿತು ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ತಮ್ಮ ವಕೀಲಿಕೆಯ ದಿನಗಳನ್ನು ನೆನೆದರು.