[ಹಿರಿಯ ನಾಗರಿಕರ ಕಾಯಿದೆ] ಪೋಷಣಾ ನ್ಯಾಯ ಮಂಡಳಿಗಳ ಮುಂದೆ ಪಕ್ಷಕಾರರನ್ನು ಪ್ರತಿನಿಧಿಸಲು ವಕೀಲರಿಗೆ ಹೈಕೋರ್ಟ್‌ ಅನುಮತಿ

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ ಸೆಕ್ಷನ್‌ 17 ಅಸಾಂವಿಧಾನಿಕ ಎಂದು ಆದೇಶಿಸುವಂತೆ ಅರ್ಜಿದಾರರು ಕೋರಿದ್ದರು.
Justice M Nagaprasanna and Karnataka HC
Justice M Nagaprasanna and Karnataka HC

ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕಲ್ಯಾಣ ಕಾಯಿದೆ 2007ರ ಅಡಿ ಪರಿಹಾರ ಕೋರಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಮುಂದೆ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸುವ ಹಿರಿಯ ನಾಗರಿಕರಿಗೆ ವಕೀಲರ ಮೂಲಕ ಪ್ರತಿನಿಧಿಸಿಕೊಳ್ಳುವ ಹಕ್ಕು ಇರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ತೀರ್ಪು ನೀಡಿದೆ.

ಉಡುಪಿ ಜಿಲ್ಲೆಯ ಪುತ್ತೂರಿನ ಕೆ ಶ್ರೀನಿವಾಸ್‌ ಗಾಣಿಗಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಜಿಲ್ಲಾಧಿಕಾರಿ ಮುಂದೆ ಇದ್ದ ಪ್ರಕ್ರಿಯೆಯಲ್ಲಿ ಅರ್ಜಿದಾರರ ಪರವಾಗಿ ವಕೀಲರು ಮೇಲ್ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ನಿರಾಕರಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹಾಗೂ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ ಸೆಕ್ಷನ್‌ 17 ಅಸಾಂವಿಧಾನಿಕ ಎಂದು ಆದೇಶಿಸುವಂತೆ ಅರ್ಜಿದಾರರು ಕೋರಿದ್ದರು.

ಪೋಷಕರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ 2007ರ ಅಡಿ ಸ್ಥಾಪಿಸಲಾಗದ ನ್ಯಾಯ ಮಂಡಳಿ ಅಥವಾ ಒಕ್ಕೂಟದ ಮುಂದೆ ಪಕ್ಷಕಾರರನ್ನು ಪ್ರತಿನಿಧಿಸಲು ವಕೀಲರಿಗೆ ನಿರ್ಬಂಧಿಸಿದ್ದ ಕಾಯಿದೆಯ ಸೆಕ್ಷನ್‌ 17, ವಕೀಲರ ಕಾಯಿದೆ ಸೆಕ್ಷನ್‌ 30ಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಆ ಮೂಲಕ ನಿರ್ವಹಣಾ ನ್ಯಾಯ ಮಂಡಳಿಗಳ ಮುಂದೆ ಪಕ್ಷಕಾರರನ್ನು ಪ್ರತಿನಿಧಿಸಲು ವಕೀಲರಿಗೆ ಅನುಮತಿಸಿದೆ.

“ನ್ಯಾಯ ಮಂಡಳಿಯ ಮುಂದೆ ಏನೆಲ್ಲಾ ದಾಖಲೆಗಳನ್ನು ಹಾಜರುಪಡಿಸಬೇಕು ಎಂಬುದು ಪಕ್ಷಕಾರರಿಗೆ ಗೊತ್ತಿರುವುದಿಲ್ಲ. ಇಂಥ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಕೀಲರ ನೆರವು ಅಗತ್ಯ. ಸಾಂವಿಧಾನಿಕವಾಗಿ ದೊರೆತಿರುವ 21ನೇ ವಿಧಿಯ ಅಡಿಯ ಹಕ್ಕಿನ ಭಾಗವಾಗಿ ಕಾನೂನು ನೆರವು ಪಡೆಯುವುದನ್ನು ಮೊಟಕುಗೊಳಿಸಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಅರ್ಜಿದಾರ ಗಾಣಿಗಾ ಅವರಿಗೆ 80 ವರ್ಷ ತುಂಬಿದ್ದು, ಕಾಯಿದೆ ಅಡಿ ಅವರು ರಕ್ಷಣೆ ಕೋರಿದ್ದಾರೆ. ಅರ್ಜಿದಾರರಿಗೆ ವಯಸ್ಸಾಗಿರುವುದನ್ನು ನೋಡಿದರೆ ಅವರು ಪ್ರತಿವಾದಿಗಳಾದ ಮಕ್ಕಳ ಮುಂದೆ ಪ್ರಬಲ ವಾದ ಮಂಡಿಸಲಾಗಿಲ್ಲ. ಇದರಿಂದ ಉಪವಿಭಾಗಾಧಿಕಾರಿಯು ಸಮಚಿತ್ತವಾದ ಆದೇಶ ಮಾಡಲಾಗಿಲ್ಲ. ಅರ್ಜಿದಾರರು ಮತ್ತು ಅವರ ಪತ್ನಿಗೆ ಮನೆಯಲ್ಲಿ ಇರಲು ಸಮಸ್ಯೆ ಮಾಡಬಾರದು ಎಂದು ಉಪವಿಭಾಗಾಧಿಕಾರಿ ಆದೇಶದಲ್ಲಿ ಹೇಳಲಾಗಿದೆ. ಆದರೆ, ಅರ್ಜಿದಾರರ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ಮಾಡಲಾಗಿಲ್ಲ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“60, 70 ಅಥವಾ 80 ವರ್ಷ ತುಂಬಿದ ಪಕ್ಷಕಾರರು ತಮ್ಮ ಪ್ರಕರಣವನ್ನು ಪ್ರಬಲವಾಗಿ ಸಮರ್ಥಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಮಕ್ಕಳು ಪ್ರಬಲವಾಗಿ ವಾದ ಮಂಡಿಸುವ ಮುಂದೆ ಅವರು ನಿಶ್ಶಸ್ತ್ರವಾಗುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭವನ್ನು ಪರಿಗಣಿಸಿ ವಕೀಲರ ನೆರವು ನೀಡುವುದು ಅಗತ್ಯವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ಗಾಣಿಗಾ ಅವರು ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಕಾಯಿದೆ ರೂಪಿಸಲಾಗಿದೆ. ತನಗೆ 82 ವರ್ಷ ವಯಸ್ಸಾಗಿರುವುದರಿಂದ ಉಪವಿಭಾಗಾಧಿಕಾರ ಮುಂದೆ ವಕೀಲರ ಸಹಾಯ ಪಡೆಯಲು ಅನುಮತಿಸಬೇಕಿತ್ತು ಎಂದು ವಾದಿಸಿದ್ದರು.

ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಯಿದೆಯಲ್ಲಿ ವಕೀಲರ ನೇಮಕಾತಿಗೆ ಯಾವುದೇ ಅವಕಾಶವಿಲ್ಲ. ವಕೀಲರ ಪ್ರವೇಶಾತಿಯು ಪ್ರಕ್ರಿಯೆ ವಿಳಂಬಗೊಳಿಸುತ್ತದೆ ಎಂಬುದು ಕಾಯಿದೆಯ ಉದ್ದೇಶ ಎಂದು ವಾದಿಸಲಾಗಿತ್ತು. ಇದನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಈ ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿ ನೀಡಿದ್ದ ಹಿಂಬರಹವನ್ನು ವಜಾ ಮಾಡಿರುವ ಹೈಕೋರ್ಟ್‌, ಪ್ರಕರಣವನ್ನು ಜಿಲ್ಲಾ ದಂಡಾಧಿಕಾರಿಗೆ ಮರಳಿಸಿ, ಅರ್ಜಿದಾರರನ್ನು ವಕೀಲರು ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ, ಕಾಯಿದೆ ಅಡಿ ಅರ್ಜಿದಾರರ ಪರವಾಗಿ ವಕೀಲರ ಮನವಿಯನ್ನು ಪರಿಗಣಿಸಲು ಜಿಲ್ಲಾ ದಂಡಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಸೂಚಿಸುವ ಸಂಬಂಧ ಸೂಕ್ತ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಈ ಆದೇಶದ ಪ್ರತಿ ಕಳುಹಿಸುವಂತೆ ರಿಜಿಸ್ಟ್ರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಶ್ರೀನಿವಾಸ ಗಾಣಿಗಾ ಅವರು ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಬಳಿ 1972 ಮತ್ತು 2003ರಲ್ಲಿ ಆಸ್ತಿ ಖರೀದಿಸಿದ್ದರು. ಈ ಸಂದರ್ಭದಲ್ಲಿ ಗಾಣಿಗಾ ಅವರು ಮೂರನೇ ಪ್ರತಿವಾದಿಯಾದ ಪುತ್ರ ನಾಗರಾಜನ ಜೊತೆ ನೆಲೆಸಿದ್ದರು. ಪುತ್ರರಾದ ನಾಗರಾಜ ಮತ್ತು ವಾದಿರಾಜ ಇಬ್ಬರೂ ಸೇರಿಕೊಂಡು ತಂದೆಯ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಬಳಿಕ ನಾಗರಾಜ ಅವರು ತಂದೆ ಮತ್ತು ತಾಯಿ ಮೇಲೆ ಮಾನಸಿಕ ಮತ್ತು ದೈಹಿಕ ಹಲ್ಲೆ ಮಾಡುತ್ತಿದ್ದರು. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ ಜಾರಿಗೆ ಬಂದ ಬಳಿಕ ಅರ್ಜಿದಾರ ಶ್ರೀನಿವಾಸ ಅವರು ತಮ್ಮ ಪುತ್ರರಿಬ್ಬರೂ ಸೇರಿಕೊಂಡು ವಂಚಿಸಿ, ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಹೆಸರಿಗೆ ಮರಳಿಸುವಂತೆ ಉಪವಿಭಾಗಾಧಿಕಾರಿ ಕಚೇರಿ ಕದತಟ್ಟಿದ್ದರು. 2022ರ ಡಿಸೆಂಬರ್‌ 22ರಂದು ಉಪವಿಭಾಗಾಧಿಕಾರಿಯು ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ್ದು, ಶ್ರೀನಿವಾಸ ಮತ್ತು ಅವರ ಪತ್ನಿಗೆ ಅಡ್ಡಿ ಮಾಡಬಾರದು ಎಂದು ಆದೇಶಿಸಿದ್ದರು.

ಅಲ್ಲದೇ, ಆಸ್ತಿಯು ಅವರ ಜೀವಿತಾವಧಿಯಲ್ಲಿ ಅವರ ಹೆಸರಿನಲ್ಲೇ ಇರಲಿದೆ. ಪೋಷಕರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಶ್ರೀನಿವಾಸ ಅವರು ಜಿಲ್ಲಾ ದಂಡಾಧಿಕಾರಿಯ ಮುಂದೆ ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಿದ್ದರು. 2023ರ ಫೆಬ್ರವರಿ 21ರಂದು ಜಿಲ್ಲಾ ದಂಡಾಧಿಕಾರಿಯು ಕಾಯಿದೆ ಸೆಕ್ಷನ್‌ 17ರ ಅಡಿ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾ ದಂಡಾಧಿಕಾರಿ ಮುಂದೆ ವಕೀಲರು ಅಸಲು ಅಥವಾ ಮೇಲ್ಮನವಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಅರ್ಜಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.

ಅರ್ಜಿದಾರರ ಪರವಾಗಿ ವಕೀಲ ಡಿ ಮೋಹನ್‌ ಕುಮಾರ್‌ ವಾದ ಮಂಡಿಸಿದ್ದರು.

Attachment
PDF
K Srinivas Ganiga Vs Union of India.pdf
Preview

Related Stories

No stories found.
Kannada Bar & Bench
kannada.barandbench.com