
ಕಲಬುರ್ಗಿಯ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ್ ವಿ. ಮುಗತಿ ಅವರು ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ನ್ಯಾಯಾಧೀಶರಾದ ವಿಶ್ವನಾಥ್ ಅವರು ಕೋರ್ಟ್ ಹಾಲ್‌ಗೆ ತೆರಳುವುದಕ್ಕೂ ಮುನ್ನ ಹೃದಯಾಘಾತವಾಗಿದೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಾಗಲಕೋಟೆಯ ಬನಹಟ್ಟಿಯಿಂದ ಕಲಬುರ್ಗಿ ಜಿಲ್ಲೆಗೆ ನ್ಯಾಯಾಧೀಶ ವಿಶ್ವನಾಥ್ ಅವರು ವರ್ಗಾವಣೆಗೊಂಡಿದ್ದರು.
2014ರಲ್ಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಯಾಗಿದ್ದ ವಿಶ್ವನಾಥ್ ಅವರು ಶಿವಮೊಗ್ಗ, ಹುಬ್ಬಳ್ಳಿ, ಗಂಗಾವತಿ ಮತ್ತು ಚನ್ನಗಿರಿಯಲ್ಲಿ ನ್ಯಾಯಾದೀಶರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.