ಹಿರಿಯ ನ್ಯಾಯವಾದಿ ಪದವಿ ಸವಲತ್ತಾಗಿದ್ದು ವಕೀಲರು ಹಕ್ಕಿನ ಆಧಾರದ ಮೇಲೆ ಮೀಸಲಾತಿ ಕೇಳುವ ಹುದ್ದೆ ಅದಲ್ಲ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಹಾಗಾಗಿ ಹಿರಿಯ ನ್ಯಾಯವಾದಿ ಪದವಿಗೆ ವಕೀಲರು ಲಿಂಗ ಸೇರಿದಂತೆ ವಿವಿಧ ವರ್ಗಗಳಡಿ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಡಿಸೆಂಬರ್ 23 ರಂದು ನೀಡಿದ ತೀರ್ಪಿನಲ್ಲಿ ಹೇಳಿದೆ.
ಹೀಗಾಗಿ ಯಾವುದೇ ಮೇಲ್ಮನವಿ ನ್ಯಾಯಾಲಯದಲ್ಲಿ ಒಟ್ಟು ಗೊತ್ತುಪಡಿಸಿದ ಹಿರಿಯ ನ್ಯಾಯವಾದಿಗಳಲ್ಲಿ ಶೇ. 30 ರಿಂದ 50ರಷ್ಟು ಮಹಿಳಾ ವಕೀಲರಿರಬೇಕು ಎಂದು ಕೋರಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಸುಂದರ್ ಮತ್ತು ಎನ್ ಸತೀಶ್ ಕುಮಾರ್ ಅವರಿದ್ದ ಪೀಠ ವಜಾಗೊಳಿಸಿತು.
ಅರ್ಜಿ ಸಲ್ಲಿಸಿದ್ದ ಮಧುರೈ ಜಿಲ್ಲೆಯ ವಕೀಲರಾದ ಎಸ್ ಲಾರೆನ್ಸ್ ವಿಮಲರಾಜ್ ಅವರು ನ್ಯಾಯಾಲಯದಲ್ಲಿ ವಕೀಲೆಯರಿಗೆ ಹೆಚ್ಚು ಪ್ರಾತಿನಿಧ್ಯ ದೊರಕಿಸಿಕೊಡಲು ಮೀಸಲಾತಿ ಅನಿವಾರ್ಯ ಎಂದು ತಿಳಿಸಿದ್ದರು.
ಆದರೆ ವಿಮಲರಾಜ್ ಅವರು ಪ್ರಕರಣದಲ್ಲಿ ಖುದ್ದು ಸಂತ್ರಸ್ತರಲ್ಲ ಅಥವಾ ಇದು ಬೇರೆಯವರ ಪರವಾಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಅಲ್ಲ ಹೀಗಾಗಿ ಅರ್ಜಿ ಸಲ್ಲಿಸಲು ಅವರಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ನ್ಯಾಯಾಲಯ ಹೇಳಿತು.
ಅಲ್ಲದೆ ಅರ್ಜಿಯನ್ನು ಅರ್ಹತೆಯ ಆಧಾರದಲ್ಲಿಯೂ ನ್ಯಾಯಾಲಯ ಪರಿಶೀಲಿಸಿತು. ತೀರ್ಪು ಬರೆದ ನ್ಯಾ. ಸುಂದರ್ ಅವರು “2022ರಲ್ಲಿ ಮದ್ರಾಸ್ ಹೈಕೋರ್ಟ್ ಒಟ್ಟು 161 ವಕೀಲರು ಹಿರಿಯ ನ್ಯಾಯವಾದಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 9 ಮಂದಿ ಮಾತ್ರ ಮಹಿಳೆಯರಿದ್ದಾರೆ. ಇವರಲ್ಲಿ ಇಬ್ಬರು ಮಹಿಳಾ ಅರ್ಜಿದಾರರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿಯೊಂದಿಗಿನ ಸಂವಾದಕ್ಕೆ ಹಾಜರಿರಲಿಲ್ಲ ಎಂದಿದ್ದಾರೆ. ಹೀಗಾಗಿ ಕೇವಲ ಅಂಕಿ ಅಂಶಗಳನ್ನು ಗಮನಿಸಿದರೂ ಸಾಕು ವಕೀಲೆಯರಿಗೆ ಶೇ 30ರಷ್ಟು ಹುದ್ದೆ ಮೀಸಲಿಡುವುದಕ್ಕೆ ಯಾವುದೇ ಮಾರ್ಗೋಪಾಯ ಕಾಣದು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿಯನ್ನು ಅರ್ಹತೆಯ ಆಧಾರದಲ್ಲಿ ನ್ಯಾಯಾಲಯ ಪರಿಶೀಲಿಸಿದೆ. "ವಕೀಲರನ್ನು ಹಿರಿಯ ನ್ಯಾಯವಾದಿಗಳನ್ನಾಗಿ ಗುರುತಿಸುವುದು ವಕೀಲರಿಗೆ ನೀಡುವ ಗೌರವ ಮತ್ತು ಸವಲತ್ತಿನ ವಿಚಾರ ಎಂಬುದನ್ನು ಗಮನಿಸುವುದು ಪ್ರಸ್ತುತ. ಅಂತಹ ಸವಲತ್ತು ಮತ್ತು ಗೌರವವು ಮೀಸಲಾತಿಯನ್ನು ಆಧರಿಸಿರಬಾರದು ಎಂದು ಈ ನ್ಯಾಯಾಲಯ ಅಭಿಪ್ರಾಯಪಡುತ್ತಿದೆ. ಅದು ವಕೀಲ ಸದಸ್ಯರ ಲಿಂಗವನ್ನು ಪರಿಗಣಿಸದೆ ಅವರ ಅರ್ಹತೆ, ಸಾಮರ್ಥ್ಯ ಹಾಗೂ ಯಶಸ್ವಿ ವೃತ್ತಿಜೀವನವನ್ನು ಆಧರಿಸಿರಬೇಕು" ಎಂದು ಪೀಠ ಹೇಳಿದೆ.
ತಮ್ಮ ಸಹಮತದ ಪ್ರತ್ಯೇಕ ತೀರ್ಪಿನಲ್ಲಿ ನ್ಯಾ. ಸತೀಶ್ ಕುಮಾರ್ ಅವರು " ಹಿರಿಯ ನ್ಯಾಯವಾದಿ ಹುದ್ದೆಯು ವಕೀಲರ ಸಾಮರ್ಥ್ಯ, ನ್ಯಾಯವಾದಿಯಾಗಿ ಸಲ್ಲಿಸಿರುವ ಸೇವೆ, ಕಾನೂನಿನ ಅನುಭವ ಅಥವಾ ವಿಶೇಷ ಜ್ಞಾನವನ್ನು ಆಧರಿಸಿ ನ್ಯಾಯಾಲಯದ ಅಭಿಪ್ರಾಯದ ಆಧಾರದಲ್ಲಿ ಒದಗಿಸುವ ಒಂದು ಸವಲತ್ತಾಗಿದೆ. ಹೀಗಾಗಿ ವಸ್ತುನಿಷ್ಠ ಪರಿಗಣನೆಗಳ ಆಧಾರದಲ್ಲಿ ನಡೆದಿದ್ದರೂ ಇದು ವ್ಯಕ್ತಿನಿಷ್ಠ ನಿರ್ಧಾರವಾಗಿದೆ. ಪ್ರಕರಣದ ನೆಲೆಯಲ್ಲಿ ಇದನ್ನು ಹಕ್ಕಿನ ವಿಷಯವಾಗಿ ನೋಡಬಾರದು ಎಂದು ನ್ಯಾಯಾಲಯ ಹೇಳುವುದು ಸೂಕ್ತವಾಗುತ್ತದೆ” ಎಂದುಹೇಳಿದ್ದಾರೆ.