ಹಿರಿಯ ವಕೀಲ ಹುದ್ದೆ: ಸಂದರ್ಶನ ಮಾನದಂಡವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

“ವರ್ಷಕ್ಕೆ ಒಮ್ಮೆ ಹಿರಿಯ ವಕೀಲರಾಗಿ ಪದೋನ್ನತಿ ನೀಡುವ ಪ್ರಕ್ರಿಯೆ ನಡೆಯಬೇಕು. ಯುವ ವಕೀಲರು ಹಿರಿಯ ವಕೀಲ ಹುದ್ದೆಗೆ ಅರ್ಜಿ ಹಾಕಬಾರದು ಎಂದೇನೂ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.
Lawyers, Supreme Court
Lawyers, Supreme Court
Published on

ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡುವ ವಿಚಾರದಲ್ಲಿ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಪಾಲಿಸುತ್ತಿರುವ ಸಂದರ್ಶನ ಮಾನದಂಡವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದೆ. ಆದರೆ, ಲೇಖನ ಪ್ರಕಟಣೆಗಳಿಗೆ ನೀಡುತ್ತಿದ್ದ ಅಂಕ ನೀಡುವ ಮಾನದಂಡವನ್ನು ತೆಗೆದುಹಾಕಿದೆ [ಇಂದಿರಾ ಜೈಸಿಂಗ್‌ ವರ್ಸಸ್‌ ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾ].

ಹಿರಿಯ ವಕೀಲರ ಹುದ್ದೆಗೆ ಪದೋನ್ನತಿ ನೀಡುವ ವಿಚಾರದಲ್ಲಿ ನ್ಯಾಯಮೂರ್ತಿಗಳ ಮತದಾನವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಗೌಪ್ಯವಾಗಿರಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ಅರವಿಂದ್‌ ಕುಮಾರ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

“ನಾವು ಸಂದರ್ಶನದ ಮಾನದಂಡಗಳನ್ನು ಎತ್ತಿ ಹಿಡಿದಿದ್ದೇವೆ ಏಕೆಂದರೆ ಇದು ಸಮಗ್ರ ಮೌಲ್ಯಮಾಪನವನ್ನು ಸಾಧ್ಯವಾಗಿಸುತ್ತದೆ. ಇದನ್ನು ಕಾರ್ಯಸಾಧ್ಯವಾಗುವಂತೆ ಮಾಡಲು ಪ್ರಯತ್ನಿಸಿದ್ದು, ಇದಕ್ಕಾಗಿ ಅಭ್ಯರ್ಥಿಗಳ ಸಂಖ್ಯೆಯನ್ನು ಸುವ್ಯವಸ್ಥಿತವಾಗಿ ಇರಿಸಿದ್ದೇವೆ. ಈ ವರ್ಗದಲ್ಲಿ ಅಂಕಗಳನ್ನು ನಾವು ಕಡಿತಗೊಳಿಸಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಹಲವು ಅಂಶಗಳನ್ನು ನಾವು ಉಲ್ಲೇಖಿಸಿದ್ದು, ಮೊದಲನೆಯದು ಗೌಪ್ಯ ಮತದಾನ. ಶಾಶ್ವತ ಸಮಿತಿಯ ದೃಷ್ಟಿಯಿಂದ ಇದು ಯಾವುದೇ ಉದ್ದೇಶವನ್ನು ಈಡೇರಿಸುವುದಿಲ್ಲ. ಅಂತಿಮ ಪಟ್ಟಿಗಳಿಂದ ಹೆಸರುಗಳನ್ನು ಹೊರಗಿಡುವುದಕ್ಕೆ ಇದು ದಾರಿಯಾಗಿದೆ. ನ್ಯಾಯಮೂರ್ತಿಗಳ ಮೇಲೆ ಮಾಡಲಾಗುವ ಟೀಕೆಗಳು ಹಾನಿಕಾರಕ ಪರಿಣಾಮಗಳನ್ನುಂಟು ಮಾಡಬಹುದು. ಹೀಗಾಗಿ, ಗೌಪ್ಯ ಮತದಾನವು ಅನಿವಾರ್ಯ ಸಂದರ್ಭದಲ್ಲಿ ಆಗಬೇಕೆ ವಿನಾ ಅದು ನಿಯಮವಾಗಬಾರದು. ಅದೇ ರೀತಿ ಇಂತಹ ಸಂದರ್ಭದಲ್ಲಿ ಕಾರಣಗಳನ್ನು ಉಲ್ಲೇಖಿಸಬೇಕು. ಕಟ್‌ಆಫ್‌ಗಳನ್ನು ನಿಗದಿಪಡಿಸುವುದು ಕಷ್ಟವಾಗಲಿದ್ದು, ಪ್ರಕಟಣೆಗೆ ನೀಡುವ ಅಂಕಗಳನ್ನು ಸೇರ್ಪಡೆ ಮಾಡಬಾರದು” ಎಂದು ಆದೇಶದಲ್ಲಿ ಹೇಳಲಾಗಿದೆ.

“ವಕೀಲರು ಶೈಕ್ಷಣಿಕ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು, ಗುಣಾತ್ಮಕ ಬರಹಗಳಿಗೆ ಅಂಕ ನಿಗದಿಪಡಿಸುವುದು ಶಾಶ್ವತ ಸಮಿತಿಗೆ ಬಿಟ್ಟ ವಿಚಾರವಾಗಿದೆ. ಇದನ್ನು ಇತರೆ ಹಿರಿಯರ ಮೂಲಕ ಮಾಡಿಸಬಹುದಾಗಿದೆ. ಇದು ಸಮಿತಿಯ ಭಾರ ಹೆಚ್ಚಿಸಲಿದ್ದು, ಅನಿವಾರ್ಯವಾಗಿದೆ. ಬರವಣಿಗೆ ಸಾಮರ್ಥ್ಯಕ್ಕೆ ಐದು ಅಂಕಗಳಿರಲಿ” ಎಂದು ನ್ಯಾಯಾಲಯ ಹೇಳಿದೆ.

“ವರ್ಷಕ್ಕೆ ಒಮ್ಮೆ ಹಿರಿಯ ವಕೀಲರಾಗಿ ಪದೋನ್ನತಿ ನೀಡುವ ಪ್ರಕ್ರಿಯೆ ನಡೆಯಬೇಕು. ಯುವ ವಕೀಲರು ಹಿರಿಯ ವಕೀಲ ಹುದ್ದೆಗೆ ಅರ್ಜಿ ಹಾಕಬಾರದು ಎಂದೇನು ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇಂದಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಮಾಡಿರುವ ಮಾರ್ಪಡಿಸಿದ ನಿರ್ದೇಶನಗಳ ಅನ್ವಯವೇ ಬಾಕಿ ಉಳಿದಿರುವ ಹಿರಿಯ ವಕೀಲರಾಗಿ ಪದೋನ್ನತಿ ಕೋರಿರುವ ಅರ್ಜಿಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Kannada Bar & Bench
kannada.barandbench.com