ಕಂದಾಯ ನ್ಯಾಯಾಲಯಗಳು ವಾಟ್ಸಾಪ್, ಟೆಲಿಗ್ರಾಂ ಆ್ಯಪ್‌ಗಳ ಮೂಲಕ ನೋಟಿಸ್, ಸಮನ್ಸ್ ಜಾರಿಗೊಳಿಸಬಹುದು: ಪಂಜಾಬ್ ಹೈಕೋರ್ಟ್

ಇದೇ ವೇಳೆ ವಿವಿಧ ಕಾಯಿದೆಗಳಡಿ ನಮೂದಿಸಲಾದ ಮುನಾಡಿ ಕ್ರಿಯೆ (ಡಂಗುರ ಸಾರುವ ಅಭ್ಯಾಸ) ಗತಕಾಲಕ್ಕೆ ಸಂದಿರುವುದರಿಂದ ಅದನ್ನು ತೆಗೆದುಹಾಕಲು ನ್ಯಾಯಾಲಯ ಸೂಚಿಸಿತು.
Punjab and Haryana High with Justice Arvind Singh Sangwan
Punjab and Haryana High with Justice Arvind Singh Sangwan

ನೋಟಿಸ್‌, ಸಮನ್ಸ್‌ ಹಾಗೂ ಅರ್ಜಿಗಳ ವಿನಿಮಯದಂತಹ ಕಾರ್ಯವನ್ನು ಇ- ಮೇಲ್‌ ಫ್ಯಾಕ್ಸ್‌ ಹಾಗೂ ಸಾಮಾನ್ಯವಾಗಿ ಬಳಸುವಂತಹ ತ್ವರಿತ ಸಂದೇಶ ಸೇವೆಗಳಾದ ವಾಟ್ಸಾಪ್‌ ಟೆಲಿಗ್ರಾಂ ಮೂಲಕ ಜಾರಿಗೆ ತರಬಹುದು ಎಂದು ಕಂದಾಯ ನ್ಯಾಯಾಲಯಗಳಿಗೆ ಮಾರ್ಗಸೂಚನೆ ನೀಡುವಂತೆ ಪಂಜಾಬ್‌ ರಾಜ್ಯ ಸರ್ಕಾರ ಹಾಗೂ ಹರ್ಯಾಣ ಕೇಂದ್ರಾಡಳಿತ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಅಮರ್‌ ಸಿಂಗ್‌ ಮತ್ತು ಸಂಜೀವ್‌ ಕುಮಾರ್‌ ನಡುವಣ ಪ್ರಕರಣ].

ಭೂಸ್ವಾಧೀನ ಹೊಂದಿರುವ ಕಕ್ಷಿದಾರರು  ಕಂದಾಯ ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬಗೊಳಿಸುತ್ತಿದ್ದು ಅಂತಹ ಕಡೆಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು  ನ್ಯಾ. ಅರವಿಂದ್‌ ಸಿಂಗ್‌ ಸಾಂಗ್ವಾನ್‌ ಅವರು ಈ ಆದೇಶ ನೀಡಿದರು.

ಇದೇ ವೇಳೆ ವಿವಿಧ ಕಾಯಿದೆಗಳಡಿ ನಮೂದಿಸಲಾದ  ಮುನಾಡಿ (ಡಂಗುರ ಸಾರುವ ಅಭ್ಯಾಸ) ಗತಕಾಲಕ್ಕೆ ಸಂದಿರುವುದರಿಂದ ಅದನ್ನು ತೆಗೆದುಹಾಕಲು ನ್ಯಾಯಾಲಯ ಸೂಚಿಸಿತು.

“ಮೇಲಿನ ವಿಧಾನಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡರೂ ಪರಿಣಾಮಕಾರಿಯಾಗಿ ಸಮನ್ಸ್‌ ನೀಡಲು ಸಾಧ್ಯವಾಗದೇ ಇದ್ದರೆ ಆಗ ಕಂದಾಯ ನ್ಯಾಯಾಲಯಗಳ ವಿವೇಚನೆ ಬಳಸಿ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲು ಆದೇಶಿಸಬಹದು” ಎಂದು ಅದು ಹೇಳಿತು.

ಪ್ರಕರಣವೊಂದರ ವೇಳೆ ಹತ್ತೊಂಬತ್ತು ವರ್ಷಗಳ ಹಳೆಯ ಪಾಲುದಾರಿಕೆ ಅರ್ಜಿಯನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಲು ಕಂದಾಯ ನ್ಯಾಯಾಲಯಕ್ಕೆ ತಾನು ಈ ಹಿಂದೆ ನೀಡಿದ್ದ ಆದೇಶ ಪಾಲನೆಯಾಗಿಲ್ಲದಿರುವುದನ್ನು ನ್ಯಾಯಾಲಯ ಗಮನಿಸಿತು.‌ ಕಕ್ಷಿದಾರರಿಗೆ ಪದೇಪದೇ ನೋಟಿಸ್‌ ಜಾರಿಮಾಡಿದರೂ ಸಮನ್ಸ್‌ ನೀಡಲು ಸಾಧ್ಯವಾಗಿಲ್ಲ ಮತ್ತು ಪ್ರಕ್ರಿಯೆಗಳು ದೀರ್ಘಕಾಲ ಬಾಕಿ ಉಳಿದಿವೆ ಎಂದು ಅಫಿಡವಿಟ್‌ನಲ್ಲಿ ಸಹಾಯಕ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಸಂಬಂಧ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.

Related Stories

No stories found.
Kannada Bar & Bench
kannada.barandbench.com