ಸೇವಾ ನಿಯಮಗಳ ಅತಿ ತಾಂತ್ರಿಕ ವ್ಯಾಖ್ಯಾನ ಆಶ್ರಯಿಸುವ ಮೂಲಕ ಲೈಂಗಿಕ ದುರ್ನಡತೆಯ ವಿಚಾರಣೆಯ ಪ್ರಕ್ರಿಯೆಗಳನ್ನು ಅಮಾನ್ಯಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ವಿಷಾದಿಸಿದೆ [ಮುದ್ರಿಕಾ ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಮೇಲ್ಮನವಿ ನ್ಯಾಯಾಲಯಗಳು ಪ್ರಕ್ರಿಯೆಯನ್ನು ಶಿಕ್ಷೆಯಾಗಿ ಪರಿವರ್ತಿಸಿದರೆ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೈ ಪರಿಹಾರ) ಕಾಯಿದೆ- 2013 ರೀತಿಯ ಪರಿವರ್ತನಾಶೀಲ ಕಾಯಿದೆಗಳು ಲೈಂಗಿಕ ಕಿರುಕುಳದಿಂದ ನೊಂದ ವ್ಯಕ್ತಿಗಳ ನೆರವಿಗೆ ಬರಲಾರವು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಹೇಳಿದೆ.
ಹೆಡ್ ಕಾನ್‌ಸ್ಟೆಬಲ್ ಆಗಿದ್ದ ಬಿಎಸ್‌ಎಫ್ ಅಧಿಕಾರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಆರೋಪವನ್ನು ಅಧಿಕಾರಿ ನಿರಾಕರಿಸಿದ್ದರು. ಸೇನಾ ಕಮಾಂಡೆಂಟ್ ಅವರು ಸಲಿಂಗಕಾಮದ ಆರೋಪ ಎತ್ತಿಹಿಡಿದು ಆರೋಪಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಯಿಂದ ಕಾನ್ಸ್‌ಟೇಬಲ್ ಶ್ರೇಣಿಗೆ ಹಿಂಬಡ್ತಿ ನೀಡಿದ್ದರು. ಬಿಎಸ್‌ಎಫ್ ಮಹಾ ನಿರ್ದೇಶಕರು ಕೂಡ ಆರೋಪಗಳನ್ನು ಎತ್ತಿ ಹಿಡಿದಿದ್ದರು. ಆದರೆ ಶಿಕ್ಷೆಯ ಪ್ರಮಾಣವನ್ನು ಮೊಟಕುಗೊಳಿಸಿದ್ದರು. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕಲ್ಕತ್ತಾ ಹೈಕೋರ್ಟ್ ಏಕಸದಸ್ಯ ಪೀಠವು ಪುರಸ್ಕರಿಸಿ ಹೆಚ್ಚುವರಿ ಸಾಕ್ಷ್ಯವನ್ನು ಸಿದ್ಧಪಡಿಸುವಂತೆ ಕೋರುವ ಅಧಿಕಾರ ಕಮಾಂಡೆಂಟ್‌ಗೆ ಇಲ್ಲ, ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿಲ್ಲ ಎನ್ನುವ ತಾಂತ್ರಿಕ ಕಾರಣ ನೀಡಿ ಶಿಕ್ಷೆಯನ್ನು ಬದಿಗೆ ಸರಿಸಿತ್ತು. ಇದನ್ನು ವಿಭಾಗೀಯ ಪೀಠವೂ ಸಹ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. ಅಧಿಕಾರಿಯ ವಿರುದ್ಧದ ಆರೋಪಗಳನ್ನು ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ಹೇಳಿದ ಪ್ರಮುಖಾಂಶಗಳು
ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಎಲ್ಲಾ ವ್ಯಕ್ತಿಗಳಿಗೆ ಒದಗಿಸಲಾದ ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕಿನ ಭಾಗವಾಗಿರುವ ಲೈಂಗಿಕ ಕಿರುಕುಳದ ವಿರುದ್ಧದ ಹಕ್ಕನ್ನು ನ್ಯಾಯಾಲಯಗಳು ಎತ್ತಿ ಹಿಡಿಯುವುದು ಮುಖ್ಯವಾಗಿದೆ. ಅಲ್ಲದೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡುವಲ್ಲಿ ನಿರತವಾಗಿರುವ ಅಧಿಕಾರದ ಆಯಾಮವನ್ನೂ ಅರ್ಥಮಾಡಿಕೊಳ್ಳಬೇಕಿದೆ.
ಆದ್ದರಿಂದ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗೆ ಸಂಬಂಧಿಸಿದಂತೆ ಎಲ್ಲರಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ನ್ಯಾಯಾಲಯಗಳು ಸೇವಾ ನಿಯಮ ಮತ್ತು ಕಾನೂನುಗಳನ್ನು ವ್ಯಾಖ್ಯಾನಿಸಲು ಕೋರುತ್ತೇವೆ.
ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠದ ನಿರ್ಧಾರವೊಂದನ್ನು ಕ್ಷುಲ್ಲಕವೆಂದು ಬಣ್ಣಿಸಿದ ನ್ಯಾಯಾಲಯ “ಇಂತಹ ಕ್ಷುಲ್ಲಕ ಅಂಶವನ್ನೇ ಗಣನೀಯವಾಗಿ ಪರಿಗಣಿಸಿ ಪ್ರತಿವಾದಿಯ ವಿರುದ್ಧ ಕೈಗೊಳ್ಳಬೇಕಾದ ಶಿಸ್ತು ಕ್ರಮಗಳನ್ನು ಅಮಾನ್ಯಗೊಳಿಸುವುದು ಮತ್ತು ಅವರನ್ನು ಮರಳಿ ಹುದ್ದೆಗೆ ನಿಯೋಜಿಸುವುದು ದೂರುದಾರರಿಗೆ ದೊರೆಯಬೇಕಿದ್ದ ಪರಿಹಾರಕ್ಕೆ ತಡೆಯೊಡ್ಡುತ್ತದೆ” ಎಂದಿದೆ.
ಈ ಪ್ರಕರಣದಲ್ಲಿ ಕಮಾಂಡೆಂಟ್‌ನ ಅಧಿಕಾರ ವ್ಯಾಪ್ತಿಯನ್ನು ಅರ್ಥೈಸುವಲ್ಲಿ ಹೈಕೋರ್ಟ್‌ನಿಂದ ತಪ್ಪಾಗಿರುವುದು ಮಾತ್ರವಲ್ಲದೆ ವಿಚಾರಣೆಯ ಗಹನತೆಗೆ ಅದು ನಿಷ್ಠುರ ಧೋರಣೆ ತೋರಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.