ಹೂಡಿಕೆದಾರರಿಗೆ ಲಾಭಾಂಶ ಹಂಚುವುದಕ್ಕೂ ಮುನ್ನ ಸಾಹಸೋದ್ಯಮ ಬಂಡವಾಳ ನಿಧಿಗಳು (ವೆಂಚರ್ ಕ್ಯಾಪಿಟಲ್ ಫಂಡ್-ವಿಸಿಎಫ್) ವೆಚ್ಚದ ರೂಪದಲ್ಲಿ ಉಳಿಸಿಕೊಂಡ ಹಣದ ಮೇಲೆ ಸೇವಾ ತೆರಿಗೆ ವಿಧಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ [ಐಸಿಐಸಿಐ ಇಕೋನೆಟ್ ಇಂಟರ್‌ನ್ಯಾಷನಲ್ ಅಂಡ್ ಟೆಕ್ನಾಲಜಿ ಫಂಡ್ ವರ್ಸಸ್ ಕೇಂದ್ರೀಯ ತೆರಿಗೆ ಆಯುಕ್ತ].
ಹಣಕಾಸು ಕಾಯಿದೆ ಅಡಿ ತೆರಿಗೆ ವಿಧಿಸಲು ಸಾಹಸೋದ್ಯಮ ಬಂಡವಾಳ ನಿಧಿಯನ್ನು ವ್ಯಕ್ತಿ ಎಂದು ಪರಿಗಣಿಸದ ಹಿನ್ನೆಲೆಯಲ್ಲಿ ಅದಕ್ಕೆ ಸೇವಾ ತೆರಿಗೆ ವಿಧಿಸುವ ಮೂಲಕ ಹೊರೆ ಹೇರಲಾಗದು ಎಂದು ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಐಸಿಐಸಿಐ ವೆಂಚರ್ ಫಂಡ್ಸ್ ನಿರ್ವಹಣೆಗೆ ಒಳಪಟ್ಟಿದ್ದ ಹಲವು ಸಾಹಸೋದ್ಯಮ ಬಂಡವಾಳ ವಿರುದ್ಧದ ಸೇವಾ ತೆರಿಗೆ ಎತ್ತಿ ಹಿಡಿದಿದ್ದ ಆಮದು ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ಸಿಇಎಸ್‌ಟಿಎಟಿ) ಆದೇಶ ಪ್ರಶ್ನಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿ ನ್ಯಾಯಾಲಯ ಆದೇಶ ಮಾಡಿದೆ.
ನಿಧಿಯ ಆಸ್ತಿಯನ್ನು ನಿರ್ವಹಿಸಿದ್ದಕ್ಕಾಗಿ ವಿಸಿಎಫ್‌ಗಳು ಉಳಿಸಿಕೊಂಡಿರುವ ಹಂಚಬಹುದಾದ ಆದಾಯದ ಭಾಗವು ಸೇವಾ ಶುಲ್ಕ ಅಥವಾ ಶುಲ್ಕವಾಗಿದ್ದು, ಅದಕ್ಕೆ ಸೇವಾ ಶುಲ್ಕ ಪಾವತಿಸಬೇಕು ಎಂದು ತೆರಿಗೆ ಇಲಾಖೆ ಹೇಳಿದೆ. ಈ ಸೇವಾ ತೆರಿಗೆ ಬೇಡಿಕೆಯನ್ನು ಸಿಇಎಸ್‌ಟಿಎಟಿ ಎತ್ತಿ ಹಿಡಿದಿತ್ತು.
ಟ್ರಸ್ಟ್ ಅನ್ನು ನ್ಯಾಯಬದ್ಧ ವ್ಯಕ್ತಿ ಎಂದು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ ಹೇಳಿದ್ದು, ವಿಸಿಎಫ್‌ಗಳನ್ನು ಭಾರತೀಯ ಟ್ರಸ್ಟ್‌ಗಳ ಕಾಯಿದೆ ಅಡಿ ಸ್ಥಾಪಿಸಲಾಗಿದ್ದು, ತೆರಿಗೆ ವಿಧಿಸಬಹುದಾದ ನ್ಯಾಯಬದ್ಧ ವ್ಯಕ್ತಿ ಎಂದು ಹೇಳಿರುವ ಸಿಇಎಸ್‌ಟಿಎಟಿ ಅಭಿಪ್ರಾಯಕ್ಕೆ ಹೈಕೋರ್ಟ್ ಅಸಮ್ಮತಿಸಿದೆ.
ವಿಸಿಎಫ್‌ಗಳನ್ನು ಹೂಡಿಕೆ ವ್ಯವಸ್ಥಾಪಕರು ನಿರ್ವಹಿಸುವುದರಿಂದ ಅವುಗಳಿಗೆ ತೆರಿಗೆ ವಿಧಿಸುವ ಅಗತ್ಯವಲ್ಲ ಎಂಬ ಮೇಲ್ಮನವಿದಾರರ ವಾದದಲ್ಲಿ ಅರ್ಹತೆ ಇದೆ ಎಂದು ನ್ಯಾಯಾಲಯ ಹೇಳಿದೆ.