ರನ್ಯಾ‌, ಆಕೆಯ ಮಲತಂದೆ ರಾಮಚಂದ್ರ ರಾವ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿದಂತೆ ಪ್ರತಿಬಂಧಕಾದೇಶ ಮಾಡಿದ ನ್ಯಾಯಾಲಯ

ಹಿರಿಯ ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ ಅವರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸಬಾರದು ಎಂದು ಹೈಕೋರ್ಟ್‌ ಮಾಧ್ಯಮಗಳನ್ನು ನಿರ್ಬಂಧಿಸಿದೆ.
ರನ್ಯಾ‌, ಆಕೆಯ ಮಲತಂದೆ ರಾಮಚಂದ್ರ ರಾವ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿದಂತೆ ಪ್ರತಿಬಂಧಕಾದೇಶ ಮಾಡಿದ ನ್ಯಾಯಾಲಯ
Published on

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ ವಿರುದ್ಧ ವಿರುದ್ಧ ಮಾಧ್ಯಮಗಳು ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಅದೇ ರೀತಿ ಆಕೆಯ ಮಲ ತಂದೆ ಐಪಿಎಸ್‌ ಅಧಿಕಾರಿ ರಾಮಚಂದ್ರರಾವ್‌ ವಿರುದ್ದ ಮಾಧ್ಯಮಗಳು ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್‌ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿವೆ.

ರನ್ಯಾ ರಾವ್‌ ತಾಯಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ 41ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎನ್‌ ವೀಣಾ ಅವರು ಬುಧವಾರ 35 ಮಾಧ್ಯಮ ಸಂಸ್ಥೆಗಳಿಗೆ ರನ್ಯಾ ವಿರುದ್ಧ ಯಾವುದೇ ತೆರನಾದ ಮಾನಹಾನಿ ಮಾಡುವ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದು ನಿರ್ಬಂಧಿಸಿ ಆದೇಶಿಸಿದರು.

ಮಾಧ್ಯಮಗಳು ಪ್ರಕರಣದ ಸಂಬಂಧ ರಂಜನಾತ್ಮಕ ಸುದ್ದಿ ಪ್ರಕಟಿಸುವುದರಿಂದ ರನ್ಯಾ ಅವರಿಗೆ ಸಂವಿಧಾನದ 21ನೇ ವಿಧಿಯಡಿ ಲಭ್ಯವಾಗಿರುವ ಹಕ್ಕು ಉಲ್ಲಂಘನೆಯಾಗಲಿದೆ. ಮಾಧ್ಯಮಗಳ ವರದಿಗಾರಿಕೆಯಿಂದ ತಪ್ಪು ಭಾವನೆ ಸೃಷ್ಟಿಯಾಗಿದ್ದು, ರನ್ಯಾ ಮೇಲೆ ಸಾರ್ವಜನಿಕವಾಗಿ ಪೂರ್ವಾಗ್ರಹಪೀಡಿತ ಅಭಿಪ್ರಾಯ ರೂಪುಗೊಳ್ಳಲಿದೆ ಎಂದು ರನ್ಯಾ ತಾಯಿ ಆಕ್ಷೇಪಿಸಿದ್ದಾರೆ.

“ನ್ಯಾಯಯುತ ಪತ್ರಿಕೋದ್ಯಮದ ಹೆಸರಿನಲ್ಲಿ ಪ್ರತಿವಾದಿ ಮಾಧ್ಯಮ ಸಂಸ್ಥೆಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ನಿಂದನಾತ್ಮಕ ಮತ್ತು ಮಾನಹಾನಿ ಸುದ್ದಿಯನ್ನು ಮಾಧ್ಯಮ ವಿಚಾರಣೆಯ ಮೂಲಕ ಬಿತ್ತಿರಿಸುತ್ತಿವೆ. ಇದು ನ್ಯಾಯಯುತ ವಿಚಾರಣೆಗೆ ಬಾದಕವಾಗಿದೆ” ಎಂದು ಆಕ್ಷೇಪಿಸಲಾಗಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ ಆಧರಿಸಿದ ಮಾಧ್ಯಮ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯವು ಮಾಧ್ಯಮ ವರದಿಗಳು ನೈತಿಕ ಮಿತಿಯನ್ನು ಮೀರಿದ್ದು, ಅವು ಆರೋಪಿಯ ಸಮರ್ಥನೆಗೆ ಪೂರ್ವಾಗ್ರಹ ಉಂಟು ಮಾಡಬಹುದು ಎಂದಿದೆ.

ಹಾದಿ ತಪ್ಪಿಸುವ ತಲೆಬರಹಗಳು, ವಿಜೃಂಭಿತ ಮತ್ತು ಊಹಾತ್ಮಕ ವರದಿಗಳಿಂದ ಮಾಧ್ಯಮ ವಿಚಾರಣೆ ವಾತಾವರಣ ಸೃಷ್ಟಿಯಾಗಿದ್ದು, ರನ್ಯಾ ವೈಯಕ್ತಿಕ ಪ್ರಾಮಾಣಿಕತೆಗೆ ಹಾನಿ ಮಾಡುವ ಸಂಭವವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ನ್ಯಾಯಾಲಯ ಮುಂದೆ ಇಟ್ಟಿರುವ ಮಾಧ್ಯಮ ವರದಿಗಳಲ್ಲಿ ಹಾಲಿ ನಡೆಯುತ್ತಿರುವ ತನಿಖೆ ಆಧರಿಸಿ ಪ್ರತಿವಾದಿ ಮಾಧ್ಯಮಗಳು ಪ್ರಸಾರ/ಪ್ರಕಟ ಮಾಡುತ್ತಿರುವ ವರದಿಗಳು ನ್ಯಾಯಾಲಯ ರೂಪಿಸಿರುವ ಮಾರ್ಗಸೂಚಿಗೆ ವಿರುದ್ಧವಾಗಿದ್ದು, ಈ ಮೂಲಕ ನ್ಯಾಯದಾನದಲ್ಲಿ ಮಧ್ಯಪ್ರವೇಶಿಕೆ ಮಾಡಿದಂತಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ. ಈ ನೆಲೆಯಲ್ಲಿ ರನ್ಯಾ ಪರವಾಗಿ ಅನುಕೂಲತೆಯ ಸಮತೋಲನವಿದ್ದು, ಮಾಧ್ಯಮಗಳನ್ನು ನಿರ್ಬಂಧಿಸದಿರುವುದು ಆಕೆಯ ಕಾನೂನಾತ್ಮಕ ಹಕ್ಕುಗಳಿಗೆ ಸರಿಪಡಿಸಲಾಗದ ಹಾನಿ ಉಂಟು ಮಾಡಲಿದೆ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ಜೂನ್‌ 2ರವರೆಗೆ ದಾವೆಯಲ್ಲಿ ಪ್ರತಿವಾದಿಯಾಗಿಸಿರುವ ಎಲ್ಲಾ ಮಾಧ್ಯಮ ಸಂಸ್ಥೆಗಳು ಹರ್ಷವರ್ದಿನಿ ರನ್ಯಾ ರಾವ್‌ ವಿರುದ್ದ ಯಾವುದೇ ಮಾನಹಾನಿ ಸುದ್ದಿ ಪ್ರಕಟ/ಪ್ರಸಾರ ಮಾಡಬಾರದು ಎಂದು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ರಾಮಚಂದ್ರ ರಾವ್‌ ವಿರುದ್ಧ ಮಾನಹಾನಿ ಮಾಧ್ಯಮ ಹೇಳಿಕೆಗೆ ಹೈಕೋರ್ಟ್‌ ನಿರ್ಬಂಧ

ರನ್ಯಾ ರಾವ್‌ ಮಲ ತಂದೆ ಹಿರಿಯ ಐಪಿಎಸ್‌ ಅಧಿಕಾರಿ ಕೆ ರಾಮಚಂದ್ರ ರಾವ್‌ ವಿರುದ್ದ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ 39 ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

Also Read
ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಜಾಮೀನು ಆದೇಶ ಮಾರ್ಚ್‌ 14ಕ್ಕೆ ಪ್ರಕಟಿಸಲಿರುವ ವಿಶೇಷ ನ್ಯಾಯಾಲಯ

ಮುಂದಿನ ವಿಚಾರಣೆವರೆಗೆ ಪ್ರತಿವಾದಿ ಮಾಧ್ಯಮಗಳು ಅರ್ಜಿದಾರ ರಾಮಚಂದ್ರ ರಾವ್‌ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಕಟ/ಪ್ರಸಾರ, ಹಂಚಿಕೆ ಮಾಡದಂತೆ ತಾತ್ಕಾಲಿಕ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಎಚ್‌ ಟಿ ನರೇಂದ್ರ ಪ್ರಸಾದ್‌ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ರಾಮಚಂದ್ರ ರಾವ್‌ ಪರ ವಕೀಲರು “ಪ್ರಕರಣದಲ್ಲಿ ರಾವ್‌ ಅವರು ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ. ಹೀಗಾಗಿ, ಮಾಧ್ಯಮಗಳು ಅವರ ವರ್ಚಸ್ಸಿಗೆ ಹಾನಿ ಮಾಡಲಾಗದು” ಎಂದು ಆಕ್ಷೇಪಿಸಿದರು.

ರಾವ್‌ ಪರವಾಗಿ ಹಿರಿಯ ವಕೀಲರಾದ ಎಂ ಅರುಣ್‌ ಶ್ಯಾಮ್‌, ವಕೀಲರಾದ ಸುದರ್ಶನ್‌ ಸುರೇಶ್‌, ಡಿ ಎಂ ಸಾಯಿನಾಥ್‌, ಅಕ್ಷಯ್‌ ವಶಿಷ್ಠ್‌, ನೇಹಾ ವೆಂಕಟೇಶ್‌, ರುಥು ಶಿವಾನಿ ಹಾಜರಿದ್ದರು.

Kannada Bar & Bench
kannada.barandbench.com