
ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ಅನ್ನು (ಪಿಒಎಸ್‌ಎಚ್- ಪೋಶ್ ಕಾಯಿದೆ) ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕಾಗಿ ಸುಪ್ರೀಂ ಕೋರ್ಟ್ ವಿವಿಧ ನಿರ್ದೇಶನಗಳನ್ನು ನೀಡಿದೆ.
ಕಾಯಿದೆಯನ್ನು ರಾಷ್ಟ್ರವ್ಯಾಪಿ ಪಾಲಿಸಬೇಕಾದ ಮಹತ್ವವನ್ನು ಒತ್ತಿಹೇಳಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಕಾಯಿದೆಯ ಸೆಕ್ಷನ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಏಕರೂಪವಾಗಿ ಜಾರಿಗೆ ತರುವಂತೆ ನಿರ್ದೇಶಿಸಿತು.
“ಇದನ್ನು ಇಡೀ ದೇಶಕ್ಕೆ ಅನ್ವಯಿಸಬೇಕಿದೆ. ನಾವು ದೆಹಲಿಯವರಲ್ಲ. ನಾನು ಕರ್ನಾಟಕದಿಂದ ದೆಹಲಿಯವರೆಗೆ ರೈಲಿನಲ್ಲಿ ಓಡಾಡಿದ್ದೇನೆ. ನಮಗೆ ಗೊತ್ತು. ಇದನ್ನು ದೇಶದಾದ್ಯಂತ ಜಾರಿಗೆ ತರಬೇಕಿದೆ” ಎಂದು ನ್ಯಾ. ನಾಗರತ್ನ ತಿಳಿಸಿದರು.
ಆದ್ದರಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು ಮತ್ತು ಮತ್ತು ಮಹಿಳೆಯರು ದೂರುಗಳನ್ನು ಸಲ್ಲಿಸಬಹುದಾದ ʼಶಿ ಬಾಕ್ಸ್ʼ (SheBox) ಪೋರ್ಟಲ್‌ಗಳನ್ನು ರಚಿಸುವುದು ಸೇರಿದಂತೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅದು ನೀಡಿರುವ ನಿರ್ದೇಶನಗಳು ಹೀಗಿವೆ:
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಡಿಸೆಂಬರ್ 31, 2024 ರೊಳಗೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾವಾರು ಅಧಿಕಾರಿಯನ್ನು ನೇಮಿಸಬೇಕು.
ಜಿಲ್ಲೆಯ ಅಧಿಕಾರಿ ಜನವರಿ 31, 2025ರೊಳಗೆ ಸ್ಥಳೀಯ ದೂರು ಸಮಿತಿ (LCC) ರಚಿಸಬೇಕು.
ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕವಾಗಬೇಕು.
ಶಿ ಬಾಕ್ಸ್ ಪೋರ್ಟಲ್‌ನಲ್ಲಿ ನೋಡಲ್ ಅಧಿಕಾರಿಗಳು, ಎಲ್‌ಸಿಸಿಗಳು ಮತ್ತು ಆಂತರಿಕ ದೂರುಸಮಿತಿಗಳ (ICCs) ವಿವರಗಳನ್ನು ಪ್ರಕಟಿಸಬೇಕು.
ಪೋಶ್ ಕಾಯಿದೆಯ ಸೆಕ್ಷನ್ 26 ರ ಅಡಿಯಲ್ಲಿ ಐಸಿಸಿ ರಚಿಸುವುದಕ್ಕಾಗಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಸಮೀಕ್ಷೆ ಮಾಡಿ ಅನುಪಾಲನಾ ವರದಿಗಳನ್ನು ಉಪ ಆಯುಕ್ತರು/ಜಿಲ್ಲಾಧಿಕಾರಿಗಳು ಸಲ್ಲಿಸಬೇಕು.
ಐಸಿಸಿ ರಚನೆ ಮತ್ತು ಶಾಸನಬದ್ಧ ನಿಬಂಧನೆಗಳ ಪಾಲನೆಗಾಗಿ ಖಾಸಗಿ ವಲಯದ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಬೇಕು.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯವಾದ ಶಿ ಬಾಕ್ಸ್ ಇಲ್ಲದ ಕಡೆಗಳಲ್ಲಿ ಅಂತಹ ಪೋರ್ಟಲ್‌ಗಳನ್ನು ರಚಿಸಬೇಕು.
ಶಿ ಬಾಕ್ಸ್‌ನಲ್ಲಿ ಸ್ವೀಕರಿಸಿದ ದೂರುಗಳನ್ನು ಸಂಬಂಧಿತ ಐಸಿಸಿಗಳು ಅಥವಾ ಎಲ್‌ಸಿಸಿಗಳಿಗೆ ರವಾನಿಸಬೇಕು.
ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಐಸಿಸಿ ರಚನೆಯಾಗುವಂತೆ ನೋಡಿಕೊಳ್ಳಬೇಕು.
ಇಡೀ ಪ್ರಕ್ರಿಯೆಯನ್ನು ಮಾರ್ಚ್ 31, 2025ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿರುವ ನ್ಯಾಯಾಲಯ ತನ್ನ ಸೂಚನೆಗಳು ಜಾರಿಯಾಗಿವೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವಂತೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದೆ.
ಕಾಯಿದೆ ಜಾರಿಯಾಗದ ಬಗ್ಗೆ 2023ರ ಮೇನಲ್ಲಿ ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕಾಯಿದೆಯನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇದ್ದರೆ, ಎಲ್ಲರೂ ಸಕಾರಾತ್ಮಕ ನಡೆ ಅನುಸರಿಸದೆ ಹೋದರೆ ಮಹಿಳೆಯರಿಗೆ ಅರ್ಹವಾದ ಗೌರವ ನೀಡುವುದಕ್ಕಾಗಿ ರೂಪುಗೊಂಡ ಪೋಶ್ ಕಾಯಿದೆ ಎಂದಿಗೂ ಯಶಸ್ವಿಯಾಗದು ಎಂದು ಅದು ಹೇಳಿತ್ತು.
ಎಲ್ಲಾ ರಾಜ್ಯ ಪದಾಧಿಕಾರಿಗಳು, ಸಾರ್ವಜನಿಕ ಅಧಿಕಾರಿಗಳು, ಖಾಸಗಿ ಉದ್ಯಮಗಳು, ಸಂಸ್ಥೆಗಳು ಮತ್ತು ಸಂಸ್ಥೆಗಳು ಪೋಶ್ ಕಾಯಿದೆಯನ್ನು ಅಕ್ಷರಶಃ ಜಾರಿಗೊಳಿಸಲು ಬದ್ಧರಾಗಿರಬೇಕು ಎಂದು ಪೀಠ ತಾಕೀತು ಮಾಡಿತ್ತು.