ಆನೆ ದಂತ ಪ್ರಕರಣ: ನಟ ಮೋಹನ್‌ ಲಾಲ್‌ಗೆ ಹಿನ್ನಡೆ; ಮಾಲೀಕತ್ವ ಪ್ರಮಾಣಪತ್ರಗಳು ಕಾನೂನುಬಾಹಿರವೆಂದ ಕೇರಳ ಹೈಕೋರ್ಟ್‌

ಆನೆ ದಂತಗಳ ಸಂಬಂಧ ಪ್ರಶ್ನಾರ್ಹ ಮಾಲೀಕತ್ವ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಹೇಗೆ ಚಲಾಯಿಸಲಾಗಿದೆ ಎಂಬುದರ ಕುರಿತು ಅರ್ಜಿದಾರರ ವಾದಗಳನ್ನು ನಿರ್ಧರಿಸುವುದರಿಂದ ದೂರ ಉಳಿದ ನ್ಯಾಯಾಲಯ.
Mohanlal, Kerala High Court
Mohanlal, Kerala High CourtFacebook
Published on

ಖ್ಯಾತ ಮಲಯಾಳಂ ಚಿತ್ರ ನಟ ಮೋಹನ್ ಲಾಲ್ ಅವರು ಎರಡು ಜೋಡಿ ಆನೆ ದಂತಗಳು ಮತ್ತು 13 ದಂತದ ಕಲಾಕೃತಿಗಳ ಮಾಲೀಕರು ಎಂದು ಘೋಷಿಸಿ ರಾಜ್ಯ ಸರ್ಕಾರ ನೀಡಿರುವ ಪ್ರಮಾಣಪತ್ರಗಳು ಅನೂರ್ಜಿತವಾಗಿದ್ದು, ಕಾನೂನುಬದ್ಧವಾಗಿ ಅವುಗಳ ಜಾರಿ ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ [ಜೇಮ್ಸ್ ಮ್ಯಾಥ್ಯೂ ವರ್ಸಸ್‌ ಕೇರಳ ರಾಜ್ಯ ಮತ್ತು ಸಂಬಂಧಿತ ಪ್ರಕರಣ]. ಇದರಿಂದಾಗಿ ಆನೆ ದಂತಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವರ್ಷಗಳಿಂದ ಮೋಹನ್‌ ಲಾಲ್‌ ನಡೆಸಿರುವ ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ.

ಈ ನಿಟ್ಟಿನಲ್ಲಿ ನ್ಯಾ. ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾ. ಜೋಬಿನ್ ಸೆಬಾಸ್ಟಿಯನ್ ಅವರ ವಿಭಾಗೀಯ ಪೀಠವು ಫೆಬ್ರವರಿ 2015 ಮತ್ತು ಫೆಬ್ರವರಿ 2016 ರಲ್ಲಿ ಅಂಗೀಕರಿಸಿದ ರಾಜ್ಯ ಸರ್ಕಾರದ ಆದೇಶಗಳು ಮತ್ತು ನಂತರ ಜನವರಿ ಮತ್ತು ಏಪ್ರಿಲ್ 2016ರಲ್ಲಿ ಮೋಹನ್‌ಲಾಲ್‌ ಅವರಿಗೆ ನೀಡಿದ್ದ ಮಾಲೀಕತ್ವದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿತು.

1972 ರ ವನ್ಯಜೀವಿ (ಸಂರಕ್ಷಣೆ) ಕಾಯಿದೆಯಡಿಯಲ್ಲಿ ಸರ್ಕಾರವು ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಈ ರೀತಿಯ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಹೇಗೆ ಚಲಾಯಿಸಲಾಯಿತು ಎಂಬುದರ ವಿವರಗಳಿಗೆ ಹೋಗುವುದರಿಂದ ಅದು ಅಂತರ ಕಾಯ್ದುಕೊಂಡಿತು. ಅಂತಹ ಅವಲೋಕನಗಳು ನಟನ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಅದು ಹೇಳಿತು.

"ನಾವು ದಿನಾಂಕ 16.12.2015 ಮತ್ತು ದಿನಾಂಕ 17.02.2016 ರ ಸರ್ಕಾರಿ ಆದೇಶಗಳು ಅಮಾನ್ಯವಾಗಿದ್ದು, ಕಾನೂನುಬದ್ಧವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸುತ್ತೇವೆ. ಸದರಿ ಸರ್ಕಾರಿ ಆದೇಶಗಳು ಹಾಗೂ ನಟನಿಗೆ (ಮೋಹನ್‌ ಲಾಲ್‌) 16.01.2016 ದಿನಾಂಕ 06.04.2016 ರಂದು ನೀಡಿರುವ ಮಾಲೀಕತ್ವ ಪ್ರಮಾಣಪತ್ರಗಳನ್ನು ಕಾನೂನುಬಾಹಿರ ಮತ್ತು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ರದ್ದುಗೊಳಿಸಲಾಗಿದೆ. ಪ್ರಶ್ನಾರ್ಹ ಮಾಲೀಕತ್ವ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಹೇಗೆ ಚಲಾಯಿಸಲಾಗಿದೆ ಎಂಬುದರ ಕುರಿತು ರಿಟ್ ಅರ್ಜಿದಾರರ ಪರವಾಗಿ ಮಂಡಿಸಲಾದ ವಾದಗಳ ಕುರಿತು ನಿರ್ಧರಿಸುವುದರಿಂದ ನಾವು ದೂರು ಉಳಿಯುತ್ತೇವೆ. ಈ ವಿಚಾರವಾಗಿ ಮಾಡಲಾಗುವ ಅವಲೋಕನಗಳು ಪ್ರತಿವಾದಿ ನಟನ ವಿರುದ್ಧ ಬಾಕಿ ಇರುವ ಕ್ರಿಮಿನಲ್ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾವು ಭಾವಿಸುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ ನ್ಯಾಯಾಲಯವು, ಯಾವುದೇ ವ್ಯಕ್ತಿಯು ತಾನು ಹೊಂದಿರುವ ವನ್ಯ ಜೀವಿಗಳಿಂದ ತಯಾರಿಸಲಾದ ವಸ್ತುಗಳನ್ನು ಬಹಿರಂಗಗೊಳಿಸಲು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನ್ 40(4)ರ ಅಡಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿತು.

ಹೀಗೆ ಬಹಿರಂಗಗೊಳಿಸುವುದು ಅಕ್ರಮವಾಗಿ ವನ್ಯಜೀವಿಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಹೊಂದಿರುವವರಿಗೆ ಸರ್ಕಾರವು ಮಾಲೀಕತ್ವ ಪ್ರಮಾಣಪತ್ರಗಳನ್ನು ನೀಡಲು ಅಥವಾ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಕ್ರಿಮಿನಲ್‌ ಮೊಕದ್ದಮೆಯಿಂದ ರಕ್ಷಣೆ ನೀಡಲು ಅಗತ್ಯವಾಗಿದೆ.

ಜೇಮ್ಸ್ ಮ್ಯಾಥ್ಯೂ ಮತ್ತು ಪೌಲೋಸ್ ಎ ಎ ಎಂಬುವರು ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ (ಪಿಐಎಲ್) ಅರ್ಜಿಗಳ ಮೇರೆಗೆ ಈ ತೀರ್ಪು ನೀಡಲಾಗಿದೆ.

1972 ರ ವನ್ಯಜೀವಿ (ರಕ್ಷಣೆ) ಕಾಯಿದೆಯ ಸೆಕ್ಷನ್ 40(4) ರ ಅಡಿಯಲ್ಲಿ ರಾಜ್ಯವು ಹೊರಡಿಸಿದ ಅಧಿಸೂಚನೆಗಳನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಈ ಅಧಿಸೂಚನೆಯು ಮೋಹನ್ ಲಾಲ್ ಅವರು ತಾವು ಎರಡು ಜೋಡಿ ಆನೆಯ ದಂತಗಳು ಮತ್ತು 13 ದಂತದ ಕಲಾಕೃತಿಗಳನ್ನು ಹೊಂದಿದ್ದೇನೆಂದು ಮುಖ್ಯ ವನ್ಯಜೀವಿ ವಾರ್ಡನ್ ಮುಂದೆ ಘೋಷಿಸಲು ಅವಕಾಶ ಮಾಡಿಕೊಟ್ಟಿತ್ತು.

ಈ ಘೋಷಣೆಗಳ ನಂತರ, ರಾಜ್ಯವು ಕಾಯಿದೆಯ ಸೆಕ್ಷನ್ 42 ರ ಅಡಿಯಲ್ಲಿ ಮಾಲೀಕತ್ವದ ಪ್ರಮಾಣಪತ್ರಗಳನ್ನು ಮೋಹನ್‌ ಲಾಲ್‌ ಅವರಿಗೆ ನೀಡಿತ್ತು. ಆದರೆ, ರಾಜ್ಯ ಸರ್ಕಾರವು ಹೊರಡಿಸಿರುವ ಅಧಿಸೂಚನೆಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಎಂದಿಗೂ ಪ್ರಕಟಿಸಲಾಗಿಲ್ಲ, ಇದು ಕಾನೂನಿನ ಅಡಿಯಲ್ಲಿ ಕಡ್ಡಾಯ ಅವಶ್ಯಕತೆಯಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅಲ್ಲದೆ, ಮೋಹನ್‌ ಲಾಲ್‌ ದಂತದ ವಸ್ತುಗಳನ್ನು ಹೊಂದಿರುವುದರ ಕಾನೂನುಬದ್ಧತೆಯ ಬಗ್ಗೆ ಸೂಕ್ತ ವಿಚಾರಣೆ ನಡೆಸಲಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Kannada Bar & Bench
kannada.barandbench.com