ಜಯಗಳಿಸಲು ನ್ಯಾಯಾಧೀಶರು ಗೊತ್ತಿರಬೇಕು, ಕಾನೂನಲ್ಲ ಎಂಬುದು ಕೆಲ ವಕೀಲ ಫಿಕ್ಸರ್‌ಗಳ ಆಲೋಚನೆ: ಮಹೇಶ್ ಜೇಠ್ಮಲಾನಿ

ಪ್ರಕರಣ ಕಳೆದುಕೊಂಡರೂ ಕಕ್ಷಿದಾರರನ್ನು ಕಳೆದುಕೊಳ್ಳಬಾರದು. ಕಕ್ಷಿದಾರ ಹೋದರೂ ನ್ಯಾಯಾಲಯವನ್ನು ಕಳೆದುಕೊಳ್ಳಬಾರದು. ಅದು ಹೋದರೂ ಆತ್ಮಸಾಕ್ಷಿ ಕಳೆದುಕೊಳ್ಳಬಾರದು ಎಂದು ತಮ್ಮ ತಂದೆ ರಾಮ್ ಜೇಠ್ಮಲಾನಿ ಹೇಳುತ್ತಿದ್ದ ಮಾತನ್ನು ಅವರು ನೆನೆದರು.
Senior Advocate Mahesh Jethmalani
Senior Advocate Mahesh Jethmalani

ಸಾಮಾಜಿಕ ನ್ಯಾಯಕ್ಕಾಗಿ ಸುಧಾರಣೆ ತರಲು ಬಯಸುವ ವಕೀಲರು ಪ್ರಚಾರ ಹಿತಾಸಕ್ತಿಯ ಮೊಕದ್ದಮೆಗಳಿಗಿಂತಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಬೇಕು ಎಂದು ಹಿರಿಯ ವಕೀಲ ಹಾಗೂ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯ ಮಹೇಶ್‌ ಜೇಠ್ಮಲಾನಿ ಅವರು ವಕೀಲರಿಗೆ ಸೋಮವಾರ ಸಲಹೆ ನೀಡಿದರು.

ನೀತಿ ನಿರೂಪಣೆಯಲ್ಲಿ ಯುವಜನರ ಪಾತ್ರ ಕುರಿತಂತೆ ವೈ 20 ಸಂವಾದ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಆತ್ಮಸಾಕ್ಷಿ ನುಡಿದಂತೆ ನಡೆಯುವುದು ವಕೀಲರ ಪ್ರಮುಖ ಕರ್ತವ್ಯವಾಗಬೇಕು ಎಂದು ಜೇಠ್ಮಲಾನಿ ಒತ್ತಿ ಹೇಳಿದರು.

Also Read
ರಾಂ ಜೇಠ್ಮಲಾನಿ : ಬದಲಾಗದ, ಪಶ್ಚಾತ್ತಾಪವಿಲ್ಲದ ನಿರ್ಭೀತ ಮನ

“ದೇಶದ ವಿವಿಧ ವಕೀಲ ವರ್ಗಗಳಲ್ಲಿ ಫಿಕ್ಸರ್‌ಗಳ (ಗೆಲುವಿಗೆ ಅಕ್ರಮವಾಗಿ ಲಾಬಿ ಮಾಡುವವರು) ಗುಂಪು ನಾಯಿಕೊಡೆಯಂತೆ ತಲೆಎತ್ತಿದೆ. ಪ್ರಕರಣ ಗೆಲ್ಲಬೇಕಾದರೆ ನ್ಯಾಯಾಧೀಶರನ್ನು ಅರಿತಿರಬೇಕೆ ವಿನಾ ಕಾನೂನನಲ್ಲ ಎಂದು ಆ ಫಿಕ್ಸರ್‌ಗಳು ಯೋಚಿಸಿದಂತಿದೆ. ವಕೀಲರು ನಯವಾಗಿ ತಪ್ಪುಗಳನ್ನು ಎತ್ತಿ ತೋರಿಸಬೇಕು ಮತ್ತು ಟೀಕಿಸಬೇಕು. ಆತ್ಮಸಾಕ್ಷಿ ನುಡಿದಂತೆ ನಡೆಯುವುದು ವಕೀಲರ ಆತ್ಯಂತಿಕ ಕರ್ತವ್ಯವಾಗಬೇಕು. ನೀವು ಬಯಸಿದರೆ ಸುಧಾರಕರಾಗಿ ಅಥವಾ ಸಾಮಾಜಿಕ ನ್ಯಾಯಕ್ಕಾಗಿ, ಪಿಐಎಲ್‌ಗಳನ್ನು ಸಲ್ಲಿಸಿ. ತಮ್ಮ ಪಿಐಎಲ್‌ಗಳಿಂದ ಕಾನೂನು ರೂಪುಗೊಳ್ಳುವಂತಹ ಹಲವು ತೀರ್ಪುಗಳನ್ನು ಪಡೆಯುವುದು ಅನೇಕ ವಕೀಲರ  ಕನಸು. ಹಾಗೆಂದು ಪ್ರಚಾರದ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸದಿರಿ. ಬದಲಿಗೆ ಸಮಾಜಕ್ಕೆ ಸೇವೆ ಸಲ್ಲಿಸಲು ಕಾನೂನು ಸೇವೆಯ ಕೆಲಸ ಮಾಡಬಹುದು ಲೇಖನಗಳನ್ನು ಬರೆಯಬಹುದು ಇಲ್ಲವೇ ಪಾಠ ಮಾಡಬಹುದು” ಎಂದು ಅವರು ಕಿವಿಮಾತು ಹೇಳಿದರು.

ಹಿಂದೆ ಭಾರತದ ಸಂವಿಧಾನ ರಚನಾ ಸಭೆಯಲ್ಲಿ 348 ಸದಸ್ಯರಲ್ಲಿ 250 ಮಂದಿ ವಕೀಲರೇ ಇದ್ದರು. ಈಗ ಕಾನೂನು ಹಿನ್ನೆಲೆ ಇರುವ ಶೇ 4 ರಷ್ಟು ಸಂಸದರು ಮಾತ್ರ ಇದ್ದಾರೆ. ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಅವರು ತಮ್ಮ ತಂದೆ ರಾಮ್‌ ಜೇಠ್ಮಲಾನಿ ಅವರ ಮಾತೊಂದನ್ನು ಪ್ರಸ್ತಾಪಿಸುತ್ತಾ “ಪ್ರಕರಣ ಕಳೆದುಕೊಂಡರೂ ಕಕ್ಷಿದಾರರನ್ನು ಕಳೆದುಕೊಳ್ಳಬಾರದು. ಕಕ್ಷಿದಾರರನ್ನು ಕಳೆದುಕೊಂಡರೂ ನ್ಯಾಯಾಲಯವನ್ನು ಕಳೆದುಕೊಳ್ಳಬಾರದು. ಅದನ್ನು ಕಳೆದುಕೊಂಡರೂ ನಿಮ್ಮ ಆತ್ಮಸಾಕ್ಷಿ ಕಳೆದುಕೊಳ್ಳಬಾರದು" ಎಂದರು.

Related Stories

No stories found.
Kannada Bar & Bench
kannada.barandbench.com