ಜೆಡಿಎಸ್ ಕಾರ್ಯಕರ್ತ ಎನ್ನಲಾದ ಯುವಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರನ್ನು ಭಾನುವಾರ ಬೆಳಿಗ್ಗೆ ಹಾಸನ ಪೊಲೀಸರು ಬಂಧಿಸಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಶನಿವಾರ ಸಂಜೆ ಹಾಸನದ ಸೈಬರ್ ಠಾಣೆಯಲ್ಲಿ ಸೂರಜ್ ಅವರನ್ನು ವಿಚಾರಣೆ ನಡೆಸಿದ ಪೊಲೀಸರು ಇಂದು (ಭಾನುವಾರ) ಬೆಳಿಗ್ಗೆ ಬಂಧಿಸಿದರು.
ಸೂರಜ್ ಅವರ ವಿರುದ್ಧ ಯುವಕನೊಬ್ಬ ಸಲ್ಲಿಸಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377 (ಅನೈಸರ್ಗಿಕ ಅಪರಾಧ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (ಬೆದರಿಕೆ), 34 (ಏಕೋದ್ದೇಶಕ್ಕಾಗಿ ವಿವಿಧ ವ್ಯಕ್ತಿಗಳು ಎಸಗಿದ ಕೃತ್ಯ) ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಚನ್ನರಾಯಪಟ್ಟಣ ತಾಲೂಕಿನ ಗನ್ನಿಗಡ ಫಾರಂ ಹೌಸ್ ಮನೆಯಲ್ಲಿ ತನ್ನೊಂದಿಗೆ ಸೂರಜ್ ರೇವಣ್ಣ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಯುವಕ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದ. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಕ ಮನವಿ ಮಾಡಿದ್ದ.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ ಶನಿವಾರ ದೂರುದಾರನಿಂದ ಹೇಳಿಕೆ ಪಡೆದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಇದಕ್ಕೂ ಮುನ್ನ ಅಂದರೆ ಶುಕ್ರವಾರ ಸೂರಜ್ ಆಪ್ತ ಶಿವಕುಮಾರ್ ಅವರು ಕೂಡ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ವ್ಯಕ್ತಿ ಪರಿಚಿತನಾಗಿದ್ದ. ನಾನು ಸೂರಜ್ ಬ್ರಿಗೇಡ್ ಖಜಾಂಚಿಯಾಗಿದ್ದರಿಂದ ಸೂರಜ್ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದ. ಅದರಂತೆ ಜೂ. 16ರಂದು ಸೂರಜ್ ಅವರು ಗನ್ನಿಗಡ ತೋಟದ ಮನೆಯಲ್ಲಿ ಸಿಗುತ್ತಾರೆ ಎಂದಿದ್ದೆ. ಸೂರಜ್ ಅವರು ತನಗೆ ಈಗ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನೀನು ಸಹಾಯ ಮಾಡದಿದ್ದರೆ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ರೂಪಾಯಿ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದು ಹಣ ನೀಡದೆ ಹೋದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಹೇಳಿದ್ದ ಎಂದು ಆರೋಪಿಸಿದ್ದರು.
ಸೂರಜ್ ಅವರ ಸಹೋದರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಸೂರಜ್ ಅವರ ವಿರುದ್ಧ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.