ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ 14 ದಿನ ನ್ಯಾಯಾಂಗ ಬಂಧನಕ್ಕೆ

ಸ್ಥಳಿಯ ಪೊಲೀಸರು ನಡೆಸಿರುವ ಪ್ರಕರಣದ ಇದುವರೆಗಿನ ತನಿಖಾ ವರದಿ ಸಿಐಡಿ ಅಧಿಕಾರಿಗಳ ಕೈ ಸೇರಿಲ್ಲ ಹಾಗೂ ಅಧಿಕೃತವಾಗಿ ಸಿಐಡಿ ವಿಚಾರಣೆ ಕೈಗೆತ್ತಿಕೊಂಡಿರದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಶಿವಕುಮಾರ್ ಅವರು ನ್ಯಾಯಾಂಗ ಬಂಧನ ಆದೇಶ ನೀಡಿದರು.
Dr. Suraj Revanna
Dr. Suraj RevannaInstagram
Published on

ಜೆಡಿಎಸ್ ಕಾರ್ಯಕರ್ತನೆನ್ನಲಾದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್‌ ರೇವಣ್ಣ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಿಗ್ಗೆ ಹಾಸನದಲ್ಲಿ ಬಂಧಿತರಾದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿ, ಶಾಸಕ ರೇವಣ್ಣ ಅವರ ಪುತ್ರ ಸೂರಜ್‌ ಅವರನ್ನು ಸಂಜೆ ಸಿಐಡಿ ಪೊಲೀಸರು ಬೆಂಗಳೂರಿನ ಕೋರಮಂಲಗದ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ನಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದರು.

ಹಾಸನ ಪೊಲೀಸರು ನಡೆಸಿರುವ ಪ್ರಕರಣದ ಇದುವರೆಗಿನ ತನಿಖಾ ವರದಿ ಸಿಐಡಿ ಅಧಿಕಾರಿಗಳ ಕೈ ಸೇರಿಲ್ಲ, ಹಾಗೂ ಅಧಿಕೃತವಾಗಿ ಸಿಐಡಿ ವಿಚಾರಣೆಯನ್ನ ಕೈಗೆತ್ತಿಕೊಂಡಿರದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಶಿವಕುಮಾರ್‌ ಅವರು ನ್ಯಾಯಾಂಗ ಬಂಧನ ಆದೇಶ ನೀಡಿದರು. ಆ ಬಳಿಕ ಸೂರಜ್‌ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹದೆಡೆಗೆ ಕರೆದೊಯ್ದರು. ಅಧಿಕೃತವಾಗಿ ತನಿಖೆ ಕೈಗೆತ್ತಿಕೊಂಡ ಬಳಿಕ ಸೂರಜ್ ಅವರನ್ನ ಸಿಐಡಿ ತನ್ನ ವಶಕ್ಕೆ ಕೋರಲಿದೆ.

ಶನಿವಾರ ಸಂಜೆ ಹಾಸನದ ಸೈಬರ್ ಠಾಣೆಯಲ್ಲಿ ಸೂರಜ್ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು ಇಂದು (ಭಾನುವಾರ) ಬೆಳಿಗ್ಗೆ ಬಂಧಿಸಿದ್ದರು. ಸೂರಜ್‌ ಅವರ ವಿರುದ್ಧ ಯುವಕನೊಬ್ಬ ಸಲ್ಲಿಸಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 (ಅನೈಸರ್ಗಿಕ ಅಪರಾಧ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (ಬೆದರಿಕೆ), 34 (ಏಕೋದ್ದೇಶಕ್ಕಾಗಿ ವಿವಿಧ ವ್ಯಕ್ತಿಗಳು ಎಸಗಿದ ಕೃತ್ಯ) ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಚನ್ನರಾಯಪಟ್ಟಣ ತಾಲೂಕಿನ ಗನ್ನಿಗಡ ತೋಟದ ಮನೆಯಲ್ಲಿ ತನ್ನೊಂದಿಗೆ ಸೂರಜ್‌ ರೇವಣ್ಣ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಯುವಕ ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದರು. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಕ ಮನವಿ ಮಾಡಿದ್ದರು.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ ಶನಿವಾರ ದೂರುದಾರನಿಂದ ಹೇಳಿಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. ಭಾನುವಾರ ಸೂರಜ್‌ ಅವರ ಬಂಧನವಾದ ಕೆಲ ಗಂಟೆಗಳ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿತ್ತು.

ಇದಕ್ಕೂ ಮುನ್ನ ಅಂದರೆ ಶುಕ್ರವಾರ ಸೂರಜ್‌ ಆಪ್ತ ಶಿವಕುಮಾರ್‌ ಅವರು ಕೂಡ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ವ್ಯಕ್ತಿ ಪರಿಚಿತನಾಗಿದ್ದ. ನಾನು ಸೂರಜ್‌ ಬ್ರಿಗೇಡ್‌ ಖಜಾಂಚಿಯಾಗಿದ್ದರಿಂದ ಸೂರಜ್‌ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದ. ಅದರಂತೆ ಜೂ. 16ರಂದು ಸೂರಜ್‌ ಅವರು ಗನ್ನಿಗಡ ತೋಟದ ಮನೆಯಲ್ಲಿ ಸಿಗುತ್ತಾರೆ ಎಂದಿದ್ದೆ. ಸೂರಜ್‌ ಅವರು ತನಗೆ ಈಗ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನೀನು ಸಹಾಯ ಮಾಡದಿದ್ದರೆ ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ರೂಪಾಯಿ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದು ಹಣ ನೀಡದೆ ಹೋದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಹೇಳಿದ್ದ ಎಂದು ಆರೋಪಿಸಿದ್ದರು.

ಸೂರಜ್‌ ಅವರ ಸಹೋದರ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಸೂರಜ್‌ ಅವರ ವಿರುದ್ಧ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.

Kannada Bar & Bench
kannada.barandbench.com