ಯುವಕನ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಜುಲೈ 18ಕ್ಕೆ ಆದೇಶ ಕಾಯ್ದಿರಿಸಿದೆ.
ಸೂರಜ್ ಬೆಂಬಲಿಗ ಎನ್ನಲಾಗಿರುವ ಎಂ ಎಲ್ ಶಿವಕುಮಾರ್ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸೋಮವಾರ ನಡೆಸಿದರು.
ಸೂರಜ್ ಪರ ವಕೀಲ ನಿಖಿಲ್ ಕಾಮತ್ ಮತ್ತು ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಅವರ ವಾದ ಆಲಿಸಿದ ನ್ಯಾಯಾಲಯವು ಜುಲೈ 18ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಸೂರಜ್ ಆಪ್ತ ಎನ್ನಲಾದ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಸೂರಜ್ ರೇವಣ್ಣ, ಚನ್ನರಾಯಪಟ್ಟಣದ ರಕ್ಷಿತ್ ಮತ್ತು ಹಾಸನದ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 342, 506, 377 ಜೊತೆಗೆ 34ರ ಅಡಿ ಜೂನ್ 25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೂರಜ್ ತನ್ನ ಮೇಲೂ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚೇತನ್ ವಿರುದ್ಧ ದೂರು ಕೊಡಿಸಲು ಸಚಿನ್, ರಕ್ಷಿತ್ ಮೂಲಕ ತನ್ನ ಮೇಲೆ ಒತ್ತಡ ಹೇರಿದ್ದಾರೆ. ಸೂರಜ್ ಪ್ರಭಾವಿ ಕುಟುಂಬದವರಾಗಿದ್ದು ಭಯದಿಂದ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎಂದು ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ.
ಇನ್ನು ಚೇತನ್ ಎಂಬಾತ ಸೂರಜ್ ಮತ್ತು ಶಿವಕುಮಾರ್ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಸೂರಜ್ ನಿಯತ ಜಾಮೀನು ಕೋರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮಂಗಳವಾರ ನಡೆಸಲಿದೆ.