ಯುವಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನದಲ್ಲಿರುವ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಕೋರಿರುವ ಜಾಮೀನು ಮನಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜುಲೈ 6ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ಜೆಡಿಎಸ್‌ನ ಸೂರಜ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರು ಸುದೀರ್ಘವಾಗಿ ನಡೆಸಿ, ಆದೇಶ ಕಾಯ್ದಿರಿಸಿದರು.
ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಘಟನೆ ನಡೆದು ಸಾಕಷ್ಟು ತಿಂಗಳ ಬಳಿಕ ತಡವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಇದು ರಾಜಕೀಯಪ್ರೇರಿತ, ಚುನಾವಣೆಯ ಸಂದರ್ಭದಲ್ಲಿ ನಿರ್ದಿಷ್ಟ ಕುಟುಂಬವನ್ನು ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಅವರು ವಿಚಾರಣೆ ನಡೆಸಬೇಕಿರುವುದರಿಂದ ಅವರು ಜಾಮೀನು ನೀಡುವುದಕ್ಕೆ ಯಾವುದೇ ಅಡ್ಡಿಯಾಗದು” ಎಂದರು.
ಮುಂದುವರಿದು, “ಐಪಿಸಿ ಸೆಕ್ಷನ್ 377 ಅನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ವಯಸ್ಕರ ನಡುವೆ ಒಪ್ಪಿಗೆ ಇತ್ತ ಅಥವಾ ಇಲ್ಲವೇ ಎಂಬ ಪ್ರಶ್ನೆ ಮಾತ್ರ ಇಲ್ಲಿ ಉಳಿದಿದೆ. ಇದನ್ನು ಸರ್ಕಾರವು ತನಿಖೆಯಲ್ಲಿ ಸಾಬೀತುಪಡಿಸಬೇಕಿದೆ. ಈಗ ತನಿಖೆ ಮುಗಿದಿದೆ ಎಂದು ಸಿಐಡಿಯು ರಿಮ್ಯಾಂಡ್ ಅರ್ಜಿ ಸಲ್ಲಿಸಿದೆ. ವೈದ್ಯಕೀಯ ಮತ್ತು ಪ್ರತ್ಯಕ್ಷ ಸಾಕ್ಷಿ ಲಭ್ಯವಿಲ್ಲ. ಹೊಳೆನರಸೀಪುರಕ್ಕೆ ಹೋಗುವಂತಿಲ್ಲ ಎಂಬುದು ಸೇರಿ ಯಾವುದೇ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.
ಸಿಐಡಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್, ದೂರುದಾರರ ನಡುವಿನ ಕರೆ ದಾಖಲೆ ಸಲ್ಲಿಸಲಾಗಿದೆ. ಮೊದಲ ಪ್ರಕರಣದಲ್ಲಿ ಸಾಕ್ಷಿಯಾಗಿರುವ ವ್ಯಕ್ತಿ (ಶಿವಕುಮಾರ್) ಸೂರಜ್ ವಿರುದ್ಧ ದೂರು ನೀಡಿದ್ದಾರೆ. ಕೋಟ್ಯಂತರ ರೂಪಾಯಿ ಹಣವನ್ನು ಸೂರಜ್ ಆಮಿಷ ಒಡ್ಡಿದ್ದಾರೆ. ಸೂರಜ್ ಕುಟುಂಬ ರಾಜಕೀಯವಾಗಿ ಬಲಾಢ್ಯವಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ” ಎಂದು ವಿರೋಧಿಸಿದರು.