ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ವಕೀಲ ಜಿ ದೇವರಾಜೇಗೌಡ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೊಳೆನರಸೀಪುರ ಠಾಣಾ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕಾಮಸಮುದ್ರ ಗ್ರಾಮದ ನಿವಾಸಿಯಾದ ಆರೋಪಿ ಜಿ ದೇವರಾಜೇಗೌಡಗೆ ಜಾಮೀನು ನಿರಾಕರಿಸಿ ಜೂನ್ 5ರಂದು ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ದೇವರಾಜೇಗೌಡ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಹೊಳೆನರಸೀಪುರದ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ದೂರುದಾರೆ ಮಹಿಳೆಯನ್ನು ಪ್ರತಿವಾದಿ ಮಾಡಲಾಗಿದೆ.
ಮಹಿಳೆಯೊಬ್ಬರು ಹೊಳೆ ನರಸೀಪುರ ಠಾಣೆಗೆ 2024ರ ಏಪ್ರಿಲ್ 1ರಂದು ದೂರು ದಾಖಲಿಸಿದ್ದರು. ಹಾಸದನ ನಿಲವಾಗಿಲು ಗ್ರಾಮದ ರಸ್ತೆಯಲ್ಲಿ 30x40 ಅಡಿ ವಿಸ್ತೀರ್ಣದ ನಿವೇಶನವನ್ನು ನನ್ನ ಪತಿ ಹೊಂದಿದ್ದಾರೆ. ಅದನ್ನು ಮಾರಾಟ ಮಾಡುವ ವಿಚಾರವಾಗಿ ದೂರು ದಾಖಲಾಗುವ ದಿನದಿಂದ 10 ತಿಂಗಳ ಹಿಂದೆ ದೇವರಾಜೇಗೌಡ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು. ಆ ನಿವೇಶನದಲ್ಲಿ ನಾನೇ ಮನೆಯನ್ನು ಕಟ್ಟಿಸಿಕೊಡುತ್ತೇನೆ. ಉಪ ವಿಭಾಗಾಧಿಕಾರಿ ನನಗೆ ಪರಿಚಯವಿದ್ದು, ನಿಮ್ಮ ಕೆಲಸ ಮಾಡಿಕೊಡುತ್ತೇನೆ. ನೀನು ಒಬ್ಬಳೇ ಹಾಸನಕ್ಕೆ ಬರಬೇಕು ಎಂದು ಹೇಳಿದ್ದರು. ನಾನು ಹಾಸನಕ್ಕೆ ಹೋದಾಗ ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಪ್ರದೇಶಕ್ಕೆ ಕರೆದೊಯ್ದು, ಮೈ ಕೈಮುಟ್ಟಿ ದೈಹಿಕ ಹಿಂಸೆ ನೀಡಿರುತ್ತಾರೆ. ನಂತರ ತಮ್ಮನ್ನು ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ನಂತರ ಹೆದರಿಸಿ ದೈಹಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿರುತ್ತಾರೆ. ಫೆಬ್ರವರಿ 2ರಂದು ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲ ಎಂದರೆ ನಾನು ನಿನಗೆ ಕಳುಹಿಸಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಗದರಿಸಿದ್ದಾರೆ ಎಂದು ಆರೋಪಿಸಿದರು. ಈ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಜೀವ ಬೆದರಿಕೆ, ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಎಫ್‌ಐಆರ್ ದಾಖಲಿಸಿ, ದೇವರಾಜೇಗೌಡ ಅವರನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ಆತ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶಿಸಿತ್ತು.
ಇದರಿಂದ ಹೈಕೋರ್ಟ್ ಮೆಟ್ಟಿಲೇರಿರುವ ದೇವರಾಜೇಗೌಡ, ತಾನು ಅಮಾಯಕನಾಗಿದ್ದೇನೆ. ಸುಳ್ಳು ಆರೋಪ ಮಾಡಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೊಲೀಸರು ಹಾಗೂ ದೂರುದಾರೆ ಮಹಿಳೆ ದುರದ್ದೇಶ ಹೊಂದಿದ್ದಾರೆ. ದೂರುದಾರೆ ಮಹಿಳೆಯೇ ತನ್ನ ನಿವೇಶನದ ವ್ಯಾಜ್ಯದ ವಿಚಾರವಾಗಿ ನನ್ನನ್ನು ಸಂಪರ್ಕಿಸಿದ್ದರು. ನಂತರ ನನ್ನ ನಂಬರ್ ಪಡೆದು ಸಂದೇಶ ಕಳುಹಿಸಿದ್ದರು. ಕೆಲ ಕಾಲದ ನಂತರ ನನ್ನ ಕಚೇರಿಗೆ ದೂರೆದಾರೆಯ ಪತಿ ಭೇಟಿ ನೀಡಿ ನನ್ನ ಮೇಲೆ ವಶೀಕರಣ ಮಾಡಿಸಿದ್ದರು. ದೂರುದಾರೆ ಕುಂಕುಮವನ್ನು ನನ್ನ ಹಣೆಗೆ ಹಚ್ಚಿದರು. ಆಗ ನನಗೆ ತಲೆತಿರುಗಿತು. ನಂತರ ವಿಡಿಯೋಕಾಲ್ ಮಾಡಿ ನನಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದರು. ಮಾಟಮಂತ್ರದಿಂದ ನಾನು ಬಲಿಪಶುವಾದೆ. ಆಕೆಯೇ ಕರೆ ಮಾಡಿ ಖಾಸಗಿ ಅಂಗ ತೋರಿಸುತ್ತಿದ್ದರು. ಮಹಿಳೆಯರನ್ನು ತೋರಿಸಿ ಕಾಮ ಪ್ರಚೋದನೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇದರಿಂದ ದೂರುದಾರೆ ಮತ್ತವರ ಗಂಡ ನನ್ನೊಂದಿಗೆ ಕಳ್ಳಾಟವಾಡುತ್ತಿದ್ದಾರೆ ಎಂಬ ಬಗ್ಗೆ ಅನುಮಾನವಾಯಿತು. ಅದನ್ನು ನಾನು ವಿಡಿಯೋ ರೆಕಾರ್ಡ್ ಮಾಡಿಕೊಂಡೆ. ಮರು ದಿನವೇ ನಾನು ಅನಾರೋಗ್ಯಕ್ಕೆ ಗುರಿಯಾದೆ. ಆ ಮೇಲೆ ನಾನು ಮಾಟಮಂತ್ರದಿಂದ ವಶೀಕರಣವಾಗಿದ್ದೇನೆ ಎಂಬುದು ನನಗೆ ಅರ್ಥವಾಯಿತು. ನಂತರ ಅನಾಮಧೇಯ ವ್ಯಕ್ತಿ ನನಗೆ ಕರೆ ಮಾಡಿ ಎರಡು ಕೋಟಿ ರೂಪಾಯಿ ಹಣ ನೀಡಬೇಕು. ಇಲ್ಲವಾದರೆ ನಿನ್ನ ಅಶ್ಲೀಲ ಪೋಟೋ-ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ತಿಳಿಸಿದರು. ಈ ಬಗ್ಗೆ ನಾನು ಬೆಂಗಳೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದೆ. ವಿಚಾರಣೆಗೆ ಹಾಜರಾದ ದೂರುದಾರೆಯು ಆ ವೇಳೆ ನನ್ನ ಮೇಲೆ ಯಾವುದೇ ಆರೋಪ ಮಾಡಿಲ್ಲ. ನಂತರ ಏಪ್ರಿಲ್ 4ರಂದು ಆಕೆ ದೂರು ನೀಡಿದ್ದಾರೆ. ದುರುದ್ದೇಶದಿಂದ ನನ್ನ ವಿರುದ್ಧ ದೂರು ದಾಖಲಿಸಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ದೇವರಾಜೇಗೌಡ ಕೋರಿದ್ದಾರೆ.
ಹೊಳನರಸೀಪುರ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354(ಎ), 354ಸಿ, 354ಡಿ, 376(1), 448, 504, 506 ಮತ್ತು 34 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66 (ಇ) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅವರು ಜಾಮೀನು ಕೋರಿದ್ದಾರೆ.