ಅತಿಥಿ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

“ಅರ್ಜಿದಾರರು ಪ್ರತಿ ಸಂದರ್ಭದಲ್ಲೂ ದೂರುದಾರ ಸಹಶಿಕ್ಷಕಿ ಮೇಲೆ ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದನ್ನು ಸಮ್ಮತಿ ಲೈಂಗಿಕತೆ ಎನ್ನಲಾಗದು. ಮೇಲ್ನೋಟಕ್ಕೆ ಬಲವಂತದ ಲೈಂಗಿಕ ಕ್ರಿಯೆ ಎಂದು ಕಂಡುಬರುತ್ತಿದೆ” ಎಂದಿರುವ ನ್ಯಾಯಾಲಯ.
Rape
Rape
Published on

ತನ್ನದೇ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರನ್ನು ಬ್ಲಾಕ್‌ಮೇಲ್‌ ಮಾಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕರೊಬ್ಬರ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇರುವ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ ಸರ್ಕಾರಿ ಶಾಲೆಯೊಂದರ ವಿಜ್ಞಾನ ಸಹ ಶಿಕ್ಷಕ ಎಚ್‌ ಲಿಂಗರಾಜ ನಾಯ್ಕ ಬಿನ್‌ ಹನುಮಂತ ನಾಯ್ಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಅರ್ಜಿದಾರರು ಪ್ರತಿ ಸಂದರ್ಭದಲ್ಲೂ ದೂರುದಾರ ಸಹಶಿಕ್ಷಕಿಯ ಮೇಲೆ ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದನ್ನು ಸಮ್ಮತಿಯ ಲೈಂಗಿಕತೆ ಎಂದು ಕರೆಯಲಾಗದು. ಮೇಲ್ನೋಟಕ್ಕೆ ಬಲವಂತದ ಲೈಂಗಿಕ ಕ್ರಿಯೆ ಎಂಬುದು ನಿಸ್ಸಂಶಯವಾಗಿ ಕಂಡುಬರುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

“ಆರೋಪಿ ಲಿಂಗಾರಾಜ ನಾಯ್ಕ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಶಿಕ್ಷಕಿಯ ನಗ್ನ ಚಿತ್ರಗಳನ್ನು ಮೊಬೈಲ್‌ ಫೋನ್‌ನಲ್ಲಿ ಸೆರೆಹಿಡಿದು ಅವುಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಬಿತ್ತರಿಸುವ ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ಶಿಕ್ಷಕಿ ತಮ್ಮ ಉದ್ಯೋಗ ಕಳೆದುಕೊಳ್ಳುವ ಮತ್ತು ಸಾರ್ವಜನಿಕ ಅವಮಾನ ಎದುರಿಸಬೇಕಾದ ಭೀತಿಯಲ್ಲಿ ಅತ್ಯಾಚಾರದ ಬಲಿಪಶುವಾಗಿರುವುದು ದುರದೃಷ್ಟಕರ” ಎಂದು ಪೀಠ ಬೇಸರಿಸಿದೆ.

“ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಶಿಕ್ಷಕಿಯ ಬಡತನ, ಅಸಹಾಯಕತೆ ಮತ್ತು ಸಂದರ್ಭವನ್ನು ಉಪಯೋಗಿಸಿಕೊಂಡು ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಈ ಹಂತದಲ್ಲಿ ರದ್ದುಗೊಳಿಸುವುದು ಸರಿಯಲ್ಲ. ಉದ್ದೇಶಪೂರ್ವಕ ಅವಮಾನ ಮತ್ತು ಅಸಹಾಯಕ ಮಹಿಳೆಗೆ ಒಡ್ಡಿರುವ ಕ್ರಿಮಿನಲ್ ಬೆದರಿಕೆ ಅಕ್ಷಮ್ಯ. ಹೀಗಾಗಿ, ಅರ್ಜಿದಾರರು ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್ ವಾದಿಸಿದ್ದರು. ಅರ್ಜಿದಾರ ಶಿಕ್ಷಕನ ಪರವಾಗಿ ವಕೀಲ ಎನ್‌ ಡಿ ಮಂಜುನಾಥ್‌ ವಾದಿಸಿದ್ದರು.

ದೂರಿನ ವಿವರ: ಆರೋಪಿ ಕೆಲಸ ನಿರ್ವಹಿಸುತ್ತಿರುವ ಶಾಲೆಯಲ್ಲಿ ತಾನು 2023ರಲ್ಲಿ ಅತಿಥಿ ಶಿಕ್ಷಕಿಯಾಗಿ ಸೇರ್ಪಡೆಯಾಗಿದ್ದೆ. ತನ್ನ ಜೊತೆ ಸ್ನೇಹ ಬೆಳೆಸಿ ಆಗಾಗ್ಗೆ ಪುಸಲಾಯಿಸಿ ಪರಿಚಯ ಗಟ್ಟಿಗೊಳಿಸಿಕೊಂಡ ಆರೋಪಿ ತನ್ನ ಮೇಲೆ ಒತ್ತಾಯಪೂರ್ವಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಷಯವನ್ನು ಬಹಿರಂಗಪಡಿಸಿದರೆ ಕೆಲಸದಿಂದ ತೆಗೆಯುವ, ಲೈಂಗಿಕ ಕ್ರಿಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮರ್ಯಾದೆ ತೆಗೆಯುವ ಬೆದರಿಕೆ ಒಡ್ಡಿದ್ದಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಪರಿಶಿಷ್ಟ ಜಾತಿಯ ಬಡ ಕುಟುಂಬಕ್ಕೆ ಸೇರಿದ ತಾನು ತಿಂಗಳಿಗೆ ₹10 ಸಾವಿರ ಸಂಬಳ ಪಡೆಯುತ್ತಿದ್ದು, ವಿಷಯ ಬಹಿರಂಗಪಡಿಸಿದರೆ ಎಲ್ಲಿ ಕೆಲಸ ಕಳೆದುಕೊಳ್ಳುತ್ತೇನೊ ಎಂಬ ಭೀತಿಯಲ್ಲಿ ದೌರ್ಜನ್ಯ ಗೌಪ್ಯವಾಗಿ ಇಟ್ಟಿದ್ದೆ. ಆರೋಪಿಯ ಹಿಂಸೆಯನ್ನು ಸಹಿಸಿಕೊಂಡು ಪತಿ ಹಾಗೂ ಮಕ್ಕಳಿಗೆ ತಿಳಿಸಲು ಮುಂದಾಗಿರಲಿಲ್ಲ. ಆದರೆ, ಒಂದು ಹಂತದಲ್ಲಿ ಕೊರಗನ್ನು ಗಮನಿಸಿದ್ದ ಪತಿ ಕಾರಣ ಕೇಳಿದಾಗ ಧೈರ್ಯ ಮಾಡಿ ಎಲ್ಲವನ್ನೂ ವಿವರಿಸಿದ್ದಾಗಿ ದೂರಿನಲ್ಲಿ ಸಂತ್ರಸ್ತೆ ಹೇಳಿದ್ದಾರೆ.

ಪತಿಯ ಸೂಚನೆಯಂತೆ ಆರೋಪಿಯನ್ನು ಒಂದು ಬಾರಿ ಮನೆಗೆ ಕರೆಸಿಕೊಂಡಿದ್ದೆ. ಈ ವೇಳೆ ಪತಿ ಮತ್ತು ಸಹೋದರರು ಆರೋಪಿಯನ್ನು ಹಾಸಿಗೆಯ ಮೇಲೆ ನಗ್ನ ಸ್ಥಿತಿಯಲ್ಲಿ ಸೆರೆ ಹಿಡಿದಿದ್ದರು. ಆಗ ಆರೋಪಿ ಕಾಲು ಹಿಡಿದು ಕ್ಷಮೆ ಕೇಳಿದ್ದರು. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೂ, ಲೆಕ್ಕಿಸದೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಆಧಾರದಲ್ಲಿ ಪೊಲೀಸರು, ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376(2)ಬಿ, 323, 504, 427, 376(2)(ಎನ್‌)(ಎಫ್‌) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಡು ತನಿಖೆ ನಡೆಸಿ ಸಾಕ್ಷ್ಯಾಧಾರಗಳ ಸಮೇತ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

Attachment
PDF
Lingaraja Naik H Vs State of Karnataka
Preview
Kannada Bar & Bench
kannada.barandbench.com