ಲೈಂಗಿಕ ದೌರ್ಜನ್ಯ ಆರೋಪ: ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ಧ ಎಫ್ಐಆರ್

ರೇವಣ್ಣ ಅವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತಿದ್ದರು. ಅಲ್ಲದೆ ತಮ್ಮ ಮಗಳಿಗೂ ಫೋನ್ ಮೂಲಕ ಅಸಭ್ಯ ನಡೆಸಿ ಪ್ರಚೋದನೆ ನೀಡುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ: ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ಧ ಎಫ್ಐಆರ್

ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌ ಡಿ ರೇವಣ್ಣ ಹಾಗೂ ಅವರ ಮಗ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಇಂದು (ಭಾನುವಾರ) ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್‌  ಪ್ರಕರಣ 354A, 354D, 506, 509ರ ಅಡಿ ಪ್ರಕರಣ ದಾಖಲಿಸಲಾಗಿದ್ದು ರೇವಣ್ಣ ಅವರನ್ನು ಮೊದಲನೇ ಆರೋಪಿ ಹಾಗೂ ಪ್ರಜ್ವಲ್‌ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ರೇವಣ್ಣ ಅವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತಿದ್ದರು. ಅಲ್ಲದೆ ತಮ್ಮ ಮಗಳಿಗೂ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ನೀಡುತ್ತಿದ್ದು ಮಗಳು ಹೆದರಿ ನಂಬರ್‌ ಬ್ಲಾಕ್‌ ಮಾಡಿಕೊಂಡಿದ್ದಳು. ಇದರಿಂದ ತಾನು ಕೆಲಸ ತೊರೆದಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈಚೆಗೆ ಜಿಲ್ಲೆಯಾದ್ಯಂತ ಪ್ರಜ್ವಲ್‌ ರೇವಣ್ಣ ಅವರು ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹಾಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಒಬ್ಬ ಮಹಿಳೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಆಕೆಯೊಂದಿಗೆ ಪ್ರಜ್ವಲ್‌ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯದ ವೀಡಿಯೊ ನೋಡಿ ಭಯವಾಗಿದ್ದು ತನ್ನ ಗಂಡ ಕೂಡ ತನ್ನ ಶೀಲ ಶಂಕಿಸುತ್ತಿದ್ದಾರೆ. ವೀಡಿಯೊ ಬಹಿರಂಗಗೊಂಡರೆ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಮಾನಸಿಕ ಹಿಂಸೆ ಆಗಿದೆ ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.

ತಮಗೆ ಜೀವ ಭಯ ಇರುವುದರಿಂದ ತಮಗೆ ಹಾಗೂ ತಮ್ಮ ಮಗಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್‌ ಡಿ ರೇವಣ್ಣ ಹಾಗೂ ಪ್ರಜ್ವಲ್‌ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಂದು (ಭಾನುವಾರ) ಬೆಳಿಗ್ಗೆ ಎಡಿಜಿಪಿ ಬಿ ಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಅದರ ಬೆನ್ನಿಗೇ ಪ್ರಜ್ವಲ್‌ ಅವರ ತಂದೆ ಎಚ್‌ ಡಿ ರೇವಣ್ಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Related Stories

No stories found.
Kannada Bar & Bench
kannada.barandbench.com