ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ: ಒಮ್ಮೆ ಕೃತ್ಯ ನಡೆದರೂ ನಿರಂತರ ಅಪರಾಧವೆಂದೇ ಪರಿಗಣಿಸಲು ಹೈಕೋರ್ಟ್‌ ಆದೇಶ

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಒಮ್ಮೆ ನಡೆದಿದ್ದರೂ ಸಂತ್ರಸ್ತರಿಗೆ ನಿರಂತರ ಆಘಾತ ಮತ್ತು ಭಯ ಉಂಟುಮಾಡಿದರೆ ಅದನ್ನು ನಿರಂತರ ಅಪರಾಧವೆಂದು ಪರಿಗಣಿಸಬೇಕು ಎಂದಿದೆ ಪೀಠ.
Madras High Court, Principal Bench
Madras High Court, Principal Bench

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಒಮ್ಮೆ ನಡೆದಿದ್ದರೂ ಕೂಡ ಅದು ಗಂಭೀರ ಸ್ವರೂಪದ್ದಾಗಿದ್ದು ಸಂತ್ರಸ್ತರ ಮನಸ್ಸಿನಲ್ಲಿ ಸದಾ ಆಘಾತ ಮತ್ತು ಭಯ ಉಂಟುಮಾಡುತ್ತಿದ್ದರೆ ಅಂತಹ ಕೃತ್ಯವನ್ನು  ನಿರಂತರ ಅಪರಾಧವೆಂದೇ ಪರಿಗಣಿಸಬೇಕು ಎಂದು ಈಚೆಗೆ ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಆದ್ದರಿಂದ ಅಂತಹ ಅಪರಾಧವನ್ನು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ [ಪಿಒಎಸ್‌ಎಚ್‌- ಪೋಷ್‌ ಕಾಯಿದೆ] ಸೆಕ್ಷನ್ 9ರ ಅಡಿ ಆರು ತಿಂಗಳ ಅವಧಿಗಷ್ಟೇ ಸೀಮಿತಗೊಳಿಸಬಾರದು ಎಂದು ನ್ಯಾಯಾಲಯ ನುಡಿದಿದೆ.

ಕೆಲಸದ ಸ್ಥಳದಲ್ಲಿ ನಡೆಯುವ ಬಹುತೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದೂರು ನೀಡಿ ಅಪಾಯ ಎದುರಿಸಬೇಕೆ? ತನ್ನ ಸುತ್ತಲೂ ಇರುವವರಿಂದ ದ್ವಿತೀಯ ಸಂತ್ರಸ್ತರಾಗಿ (ಕೃತ್ಯದ ನೇರ ಸಂತ್ರಸ್ತರಾಗಿರದೆ ಪ್ರಾಥಮಿಕ ಸಂತ್ರಸ್ತರು ಅನುಭವಿಸಿದ ಸಂಕಷ್ಟಗಳಿಂದ ಮಾನಸಿಕ ಯಾತನೆ ಅನುಭವಿಸುವವರು) ಇರಬೇಕೆ ಇಲ್ಲವೇ ಅಂತಹ ದೂರು ನೀಡದೆ ಬದುಕಬೇಕೆ ಎಂಬ ಬಗ್ಗೆ ದೂರುದಾರರು ಸಂದಿಗ್ಧತೆ ಎದುರಿಸುತ್ತಾರೆ ಎಂದು ಜೂನ್ 11ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರು ತಿಳಿಸಿದ್ದಾರೆ.

ಪೋಷ್‌ ಕಾಯಿದೆ ಅಡಿಯಲ್ಲಿ ಆಂತರಿಕ ದೂರುಗಳ ಸಮಿತಿ (ICC) ಎದುರು ಔಪಚಾರಿಕ ದೂರು ಸಲ್ಲಿಸಲು ಮತ್ತು ಸಾಕ್ಷ್ಯ ನೀಡಲು ದೂರುದಾರರಿಗೆ ಧೈರ್ಯ ಮೂಡಲು ಬಹಳಷ್ಟು ಸಮಯ ಹಿಡಿಯಬಹುದು. ಈ ಪ್ರಕ್ರಿಯೆಯಲ್ಲಿ, ದೂರುದಾರರು ಲೈಂಗಿಕ ಕಿರುಕುಳದ ಘಟನೆಯ ನಂತರವೂ ಬಳಲುತ್ತಲೇ ಇರುತ್ತಾರೆ. ಆದ್ದರಿಂದ ಅಪರಾಧ ಗಂಭೀರ ಸ್ವರೂಪದ್ದಾಗಿದ್ದು ಸಂತ್ರಸ್ತರ ಮನಸ್ಸಿನಲ್ಲಿ ನಿರಂತರ ಆಘಾತ ಮತ್ತು ಭಯ ಉಂಟುಮಾಡುತ್ತಿದ್ದರೆ ಅಂತಹ ಕೃತ್ಯವನ್ನು ನಿರಂತರ ಅಪರಾಧವೆಂದೇ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮಹಿಳಾ ಸಹೋದ್ಯೋಗಿಯೊಬ್ಬರು ತಮ್ಮ ವಿರುದ್ಧ ಮಾಡಿದ್ದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ದೂರು ಸಮಿತಿ ಸಲ್ಲಿಸಿದ್ದ ತನಿಖಾ ವರದಿ ಪ್ರಶ್ನಿಸಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜಿಲ್ಲಾ ಪೊಲೀಸ್ ಕಛೇರಿಯ ಅಧೀಕ್ಷಕ ಆರ್ ಮೋಹನಕೃಷ್ಣನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. 

ಸಂತ್ರಸ್ತೆ ಘಟನೆಯಿಂದ ಆಘಾತಕ್ಕೊಳಗಾಗಿದ್ದು ಅದನ್ನು ಕೆಲವು ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದರು. ಕೊನೆಗೆ ದೂರು ನೀಡಲು ಅನುವಾಗುವಂತೆ ಆಕೆಗೆ ಸಾಕಷ್ಟು ಆಪ್ತ ಸಮಾಲೋಚನೆ ನಡೆಸಲಾಗಿತ್ತು ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.

ಆ ಬಳಿಕವೂ ದೂರಿನ ಪ್ರತಿಯನ್ನು ಯೂಟ್ಯೂಬ್‌ನಲ್ಲಿ ಸೋರಿಕೆ ಮಾಡಿದ್ದರಿಂದ ತನ್ನ ಕುಟುಂಬಕ್ಕೆ ತನ್ನ ವಿರುದ್ಧದ ಕೃತ್ಯ ತಿಳಿಯುವ ಮತ್ತು ಸಮಾಜದಲ್ಲಿ ದ್ವಿತೀಯ ಸಂತ್ರಸ್ತೆಯಾಗಿ ನಿರಂತರ ಭಯದಲ್ಲಿ ಆಕೆ ಬದುಕುತ್ತಿದ್ದರು ಎಂಬುದನ್ನು ಗಮನಿಸಿದ ನ್ಯಾಯಾಲಯ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರಾಕರಿಸಿತು.

ಆದರೆ ಇದೇ ವೇಳೆ ಎಲ್ಲ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿಲ್ಲ ಎಂಬ ಆರೋಪಿತ ಅರ್ಜಿದಾರರ ವಾದ ಮನ್ನಿಸಿದ ನ್ಯಾಯಾಲಯ ಅದೇ ಆಂತರಿಕ ತನಿಖಾ ಸಮಿತಿ ಪುನಾರಚನೆಯಾಗಿ ಸಾಕ್ಷಿಗಳ ಪಾಟಿ ಸವಾಲಿಗೆ ಸಂಬಂಧಿಸಿದಂತೆ ಅರ್ಜಿದಾರರ ಅಹವಾಲುಗಳನ್ನು ಪರಿಹರಿಸುವಂತೆ ಸೂಚಿಸಿತು.

Kannada Bar & Bench
kannada.barandbench.com