ಓಲಾ ಕ್ಯಾಬ್‌ನ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಆರು ವರ್ಷಗಳ ಹಿಂದೆ ದೂರು ನೀಡಿದ್ದರೂ ಕಂಪೆನಿಯ ಆಂತರಿಕ ದೂರು ಸಮಿತಿ ಕ್ರಮಕೈಗೊಳ್ಳದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಬಂಧಿತರ ಕರ್ತವ್ಯ ಲೋಪ ಮತ್ತು ನಿರಾಸಕ್ತಿಯು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯಿದೆ 2013ರ ಸೆಕ್ಷನ್‌ಗಳ ಅನ್ವಯ ಓಲಾ ಕ್ಯಾಬ್ಸ್‌ನ ಮಾತೃಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಆಂತರಿಕ ದೂರು ಸಮಿತಿಗೆ 2018ರ ಸೆಪ್ಟೆಂಬರ್ 30ರಂದು ನೀಡಿರುವ ದೂರಿನ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ 22 ವರ್ಷದ ಯುವತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
“ಇಂಥ ಗಂಭೀರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಮುಖ ಸ್ಥಾನದಲ್ಲಿರುವರು, ಶಾಸನಬದ್ಧ ಅಧಿಕಾರ ಹೊಂದಿರುವವರು ಉದ್ದೇಶಪೂರ್ವಕವಾಗಿ ಎಸಗಿರುವ ಕರ್ತವ್ಯ ಲೋಪ ಮತ್ತು ವಿವರಿಸಲಾಗದ ನಿರಾಸಕ್ತಿಯನ್ನು ಈ ಪ್ರಕರಣ ಒಳಗೊಂಡಿದ್ದು, ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಘಾಸಿ ಉಂಟು ಮಾಡಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
“ವಿಶೇಷ ಕಾಯಿದೆಯಲ್ಲಿ ಅವಕಾಶವಿದ್ದರೂ ಎಎನ್‌ಐ ಟೆಕ್ನಾಲಜಿಯ ಆಂತರಿಕ ದೂರು ಸಮಿತಿಯು ಅರ್ಜಿದಾರ ಯುವತಿಯ ದೂರು ಪರಿಗಣಿಸದೇ ಇರುವುದರಿಂದ ಆಕೆಯು ಕಣ್ಣೀರಾಗಿ ಅಸಹಾಯಕತೆಯಿಂದ ನ್ಯಾಯಾಲಯದ ಕದತಟ್ಟಿದ್ದಾರೆ. ಓಲಾ ಕಂಪೆನಿಗೆ ಸೇರಿದ ಕ್ಯಾಬ್‌ನ ಚಾಲಕ ಅರ್ಜಿದಾರೆಗೆ ಕಿರುಕುಳ ನೀಡಿದ್ದಾರೆ. ಆದರೆ, ಹೊರಗಿನ ಕಾನೂನು ಸಲಹೆಗಾರರು ನೀಡಿದ ಸಲಹೆ ಆಧರಿಸಿ ಆಂತರಿಕ ದೂರು ಸಮಿತಿಯು ತನಿಖೆ ನಡೆಸಲು ನಿರಾಕರಿಸಿದೆ. ಹೊರಗಿನ ಕಾನೂನು ಸಲಹೆಗಾರರಿಗೆ ಈ ವಿಚಾರದ ಬಗ್ಗೆ ಮಾಹಿತಿ ಪಡೆಯುವ ವ್ಯಾಪ್ತಿ ಇಲ್ಲ. ಇಷ್ಟಲ್ಲದೇ, ತನಿಖೆ ನಿರಾಕರಿಸಿರುವುದಕ್ಕೆ ಆಂತರಿಕ ದೂರು ಸಮಿತಿಯು ಯಾವುದೇ ಕಾರಣ ನೀಡಿಲ್ಲ. ಇನ್ನೊಂದು ಕಡೆ, ಅಗ್ರಿಗೇಟರ್ಸ್, ಮೋಟಾರು ವಾಹನಗಳು, ಚಾಲಕರು, ಟ್ಯಾಕ್ಸಿ ಇತ್ಯಾದಿಗಳ ಆಡಳಿತಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸಾರಿಗೆ ಇಲಾಖೆಯು ಈ ಪ್ರಕರಣದಲ್ಲಿ ಯಾವುದೇ ನಿಲುವು ಕೈಗೊಂಡಂತೆ ಕಾಣುತ್ತಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ಪೀಠವು “ಆಂತರಿಕ ದೂರು ಸಮಿತಿ ಮತ್ತು ಎಎನ್‌ಐ ಟೆಕ್ನಾಲಜೀಸ್ ಸಂಸ್ಥೆಯು ಯಾರ ಸಲಹೆ ಮೇರೆಗೆ ಅರ್ಜಿದಾರೆಯ ದೂರನ್ನು ಪರಿಗಣಿಸಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಸಲ್ಲಿಸಬೇಕು. ಆಂತರಿಕ ದೂರು ಸಮಿತಿಯ ಅಧ್ಯಕ್ಷರು ಸಮಿತಿಯ ಸದಸ್ಯರ ಮಾಹಿತಿಯನ್ನು ಸಲ್ಲಿಸಬೇಕು. 02.04.2016ರಂದು ಹೊರಡಿಸಿರುವ ಅಗ್ರಿಗೇಟರ್ಸ್ ನಿಯಮಗಳ ಅಧಿಸೂಚನೆಯ ಅನುಪಾಲನೆ ಜವಾಬ್ದಾರಿ ಹೊಂದಿರುವ ಅಧಿಕಾರಿಯ ಮಾಹಿತಿಯನ್ನು ರಾಜ್ಯ ಸಾರಿಗೆ ಪ್ರಾಧಿಕಾರ ಒದಗಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣದಲ್ಲಿ ಎಎನ್‌ಐ ಟೆಕ್ನಾಲಜೀಸ್ ಪರವಾಗಿ ಹಿರಿಯ ವಕೀಲರಾದ ಧ್ಯಾನ್ ಚಿನಪ್ಪ ಮತ್ತು ಎ ಮುರಳಿ, ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ ಜಿ ಭಾನುಪ್ರಕಾಶ್ ಹಾಗೂ ಅರ್ಜಿದಾರೆಯ ಪರವಾಗಿ ವಕೀಲ ಮುಂದ್ರಾ ಕೃತಿಕಾ ಅಜಯ್ ವಾದಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪಾತ್ರದ ಕುರಿತು ವಾದಿಸಲು ಸರ್ಕಾರದ ವಕೀಲರು ಕಾಲಾವಕಾಶ ಕೋರಿರುವುದರಿಂದ ಪ್ರಕರಣವನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ.
ಕಾಯಿದೆಯ ಸೆಕ್ಷನ್‌ಗಳನ್ನು ಎಎನ್‌ಐ ಟೆಕ್ನಾಲಜೀಸ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಿರ್ದೇಶಿಸಬೇಕು. ಟ್ಯಾಕ್ಸಿ ಸೇವೆ ಪಡೆಯುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಅಗತ್ಯವಾದ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.