ಕಾರು ಚಾಲಕನಿಂದ ಲೈಂಗಿಕ ಕಿರುಕುಳ: ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ಪಾವತಿಸಲು ಓಲಾಗೆ ನಿರ್ದೇಶಿಸಿದ್ದ ಆದೇಶಕ್ಕೆ ತಡೆ

“ಇದು ₹5 ಲಕ್ಷ ಪರಿಹಾರ ಪಾವತಿಸುವ ವಿಚಾರವಲ್ಲ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯಿದೆ 2013ರ ವ್ಯಾಖ್ಯಾನಕ್ಕೆ ಸಂಬಂಧಿಸಿದ ವಿಚಾರ” ಎಂದು ಆಕ್ಷೇಪಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ.
Ola cab and Karnataka HC
Ola cab and Karnataka HC
Published on

ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪರಿಹಾರ ರೂಪದಲ್ಲಿ ₹5 ಲಕ್ಷ ಪಾವತಿಸುವಂತೆ ಓಲಾ ಕ್ಯಾಬ್‌ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್‌ಗೆ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ರಜಾಕಾಲೀನ ವಿಭಾಗೀಯ ಪೀಠ ಶುಕ್ರವಾರ ತಡೆ ನೀಡಿದೆ.

ಎಎನ್‌ಐ ಟೆಕ್ನಾಲಜೀಸ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಆರ್‌ ಕೃಷ್ಣ ಕುಮಾರ್‌ ಮತ್ತು ಎಂ ಜಿ ಉಮಾ ಅವರ ವಿಭಾಗೀಯ ಪೀಠವು ನಡೆಸಿತು.

ಮೇಲ್ಮನವಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ಇದು ₹5 ಲಕ್ಷ ಪರಿಹಾರ ಪಾವತಿಸುವ ವಿಚಾರವಲ್ಲ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯಿದೆ 2013ರ ವ್ಯಾಖ್ಯಾನಕ್ಕೆ ಸಂಬಂಧಿಸಿದ ವಿಚಾರವಾಗಿದೆ. ನಾವು ಚಾಲಕರಿಗೆ ಉದ್ಯೋಗ ನೀಡಿಲ್ಲ. ಓಲಾ ಸೇವೆಯನ್ನು ಚಾಲಕರು ಬಳಸಿಕೊಳ್ಳುತ್ತಾರೆ. ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿದ್ದಾರೆ” ಎಂದರು.

ಆಗ ಪೀಠವು ಪ್ರಕರಣದ ವಿಚಾರಣೆ ಅಗತ್ಯವಿದೆ. ಹೀಗಾಗಿ, ಸದ್ಯಕ್ಕೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲಾಗಿದೆ. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅಕ್ಟೋಬರ್‌ 28ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದಿತು.

Also Read
ಕಾರು ಚಾಲಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡಲು ಓಲಾಗೆ ನಿರ್ದೇಶಿಸಿದ ಹೈಕೋರ್ಟ್‌

ಸೆಪ್ಟೆಂಬರ್‌ 30ರಂದು ಏಕಸದಸ್ಯ ಪೀಠವು ₹5 ಲಕ್ಷ ಪರಿಹಾರ ಹಣವಲ್ಲದೆ ಸಂತ್ರಸ್ತೆಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ ₹50 ಸಾವಿರ ಮೊತ್ತವನ್ನು ಕಂಪನಿ ಪಾವತಿಸಬೇಕು. ಇದಲ್ಲದೆ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಯವರು ವೈಯಕ್ತಿಕವಾಗಿ ₹1 ಲಕ್ಷ ಹಣವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಸಂತ್ರಸ್ತೆ ನೀಡಿದ ದೂರಿನ ಕುರಿತು ಕಂಪನಿಯ ಆಂತರಿಕ ದೂರುಗಳ ಸಮಿತಿ ವಿಚಾರಣೆ ನಡೆಸಬೇಕು. ಆ ವಿಚಾರಣಾ ಪ್ರಕ್ರಿಯೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ನಗರ ಜಿಲ್ಲಾಧಿಕಾರಿ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.

ಪ್ರಕರಣದ ಹಿನ್ನೆಲೆ: 2019ರಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಕೋರಿ ಸಂತ್ರಸ್ತೆಯು ಎಎನ್‌ಐ ಟೆಕ್ನಾಲಜೀಸ್‌ಗೆ ದೂರು ನೀಡಿದ್ದರು. ಆಂತರಿಕ ದೂರುಗಳ ಸಮಿತಿಯು ತಮ್ಮ ದೂರನ್ನು ಪರಿಗಣಿಸಿ ಅದರ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಹೊಂದಿಲ್ಲ ಎಂದು ಕಂಪನಿ ಸಂತ್ರಸ್ತೆಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಏಕಸದಸ್ಯ ಪೀಠ ಪುರಸ್ಕರಿಸಿತ್ತು.

Kannada Bar & Bench
kannada.barandbench.com