ಪ. ಬಂಗಾಳ ರಾಜ್ಯಪಾಲರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ: ಗವರ್ನರ್‌ ಅಧಿಕಾರಿ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ತಡೆ

ಆರೋಪಿಯಾಗಿರುವ ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ-II ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸಿಸಿಟಿವಿ ದೃಶ್ಯಗಳ ರೂಪದಲ್ಲಿ ಸಾಕ್ಷ್ಯ ಪೊಲೀಸರ ಬಳಿ ಇದೆ ಎಂಬ ಅಂಶವನ್ನು ನ್ಯಾ. ಅಮೃತಾ ಸಿನ್ಹಾ ಅವರಿದ್ದ ಏಕಸದಸ್ಯ ಪೀಠ ಪರಿಗಣಿಸಿತು.
Calcutta High Court
Calcutta High Court
Published on

ಪ. ಬಂಗಾಳ ರಾಜ್ಯಪಾಲ ಸಿ ವಿ ಆನಂದ ಬೋಸ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡದಂತೆ ಮಹಿಳಾ ಉದ್ಯೋಗಿಯೊಬ್ಬರಿಗೆ ಒತ್ತಡ ಹೇರಿದ ಆರೋಪ ಕುರಿತು ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ-II ವಿರುದ್ಧ ನಡೆಯುತ್ತಿರುವ ತನಿಖೆಗೆ ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.  [ಸಂದೀಪ್ ಕುಮಾರ್ ಸಿಂಗ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಆರೋಪಿಯಾಗಿರುವ ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ-II ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸಿಸಿಟಿವಿ ದೃಶ್ಯಗಳ ರೂಪದಲ್ಲಿ ಸಾಕ್ಷ್ಯ ಪೊಲೀಸರ ಬಳಿ ಇದೆ ಎಂಬ ಅಂಶವನ್ನು ನ್ಯಾ. ಅಮೃತಾ ಸಿನ್ಹಾ ಅವರಿದ್ದ ಏಕಸದಸ್ಯ ಪೀಠ ಗಣನೆಗೆ ತೆಗೆದುಕೊಂಡಿತು.

"ಸಾಕ್ಷಾಧಾರಗಳು ಅಂದರೆ ಸಿಸಿಟಿವಿ ದೃಶ್ಯಾವಳಿಗಳು ಈಗಾಗಲೇ ತನಿಖಾಧಿಕಾರಿಯ (ಐಒ) ವಶದಲ್ಲಿವೆ. ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸಿದ ಅಪರಾಧ ಎಂದರೆ ಅಕ್ರಮ ಸೆರೆ ಮತ್ತು ಅಪರಾಧಕ್ಕೆ ಕುಮ್ಮಕ್ಕು ನೀಡಿದ್ದಾಗಿದೆ. ಅರ್ಜಿದಾರರು ಕೆಲವರೊಂದಿಗೆ ಸೇರಿ ದೂರುದಾರೆಯನ್ನು (ರಾಜಭವನಕ್ಕೆ) ಮರಳಿ ಕರೆದೊಯ್ಯಲು ಯತ್ನಿಸಿದರು, ಫೋನ್‌ ಕಸಿದುಕೊಳ್ಳಲು ಪ್ರಯತ್ನಿಸಿದರು ಎಂದು ಉಲ್ಲೇಖಿಸಲಾಗಿದೆ. ಆದರೆ ದೂರಿನಲ್ಲಿ ಬಹಿರಂಗಪಡಿಸಿದ ಅಂಶಗಳನ್ನು ಅಕ್ರಮ ಬಂಧನ ಎಂದು ಕರೆಯಬಹುದೇ ಎಂಬುದನ್ನು ನಿರ್ಧರಿಸಬೇಕಿದೆ. ಈ ಹಂತದಲ್ಲಿ ಜೂನ್ 17 ರವರೆಗೆ ತಾತ್ಕಾಲಿಕವಾಗಿ ತಡೆ ನೀಡಿದರೆ ತನಿಖೆಗೆ ತೊಂದರೆ ಆಗುತ್ತದೆ ಎನಿಸುವುದಿಲ್ಲ” ಎಂದು ನ್ಯಾ. ಸಿನ್ಹಾ ತಿಳಿಸಿದರು.  

ಮೇ 7ರಂದು ತನ್ನ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ. ಆದರೆ ಮೇ 2ರಂದು ದಾಖಲಾದ ದೂರಿನಲ್ಲಿ ತನ್ನ ಹೆಸರಿರಲಿಲ್ಲ. ಹಾಗಾಗಿ ನನ್ನ ವಿರುದ್ಧದ ಆರೋಪ ನಂತರದ ಸೇರ್ಪಡೆ ಎಂದು ಅಧಿಕಾರಿ ಅರ್ಜಿಯಲ್ಲಿ ತಿಳಿಸಿದ್ದರು.

ಇದಲ್ಲದೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 41 ಎ ಅಡಿಯಲ್ಲಿ ತನಗೆ ನೋಟಿಸ್ ನೀಡಲಾಗಿದೆ. ಆದರೆ ಇದನ್ನಾಗಲೇ ತಾನು ಪಾಲಿಸಿದ್ದು ಮೇ 21ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣದಲ್ಲಿ ಜಾಮೀನು ನೀಡಿದೆ. ಹೀಗಾಗಿ ತನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಅವರು ಸಮರ್ಥಿಸಿಕೊಂಡಿದ್ದರು.

ಆದರೆ ಇದಕ್ಕೆ ಅಡ್ವೊಕೇಟ್‌ ಜನರಲ್‌ ಕಿಶೋರ್‌ ದತ್ತಾ ವಿರೋಧ ವ್ಯಕ್ತಪಡಿಸಿದರು. ಆರೋಪಗಳು ಸತ್ಯಕ್ಕೆ ದೂರವೇ ಅಥವಾ ಅಲ್ಲವೇ ಎಂಬುದನ್ನು ವಿಚಾರಣೆಯ ಸೂಕ್ತ ಹಂತದಲ್ಲಿ ನಿರ್ಧರಿಸಬಹುದು ಎಂದರು. 

ವಾದ ಆಲಿಸಿದ ನ್ಯಾಯಾಲಯ, ಅಧಿಕಾರಿ ವಿರುದ್ಧ ಜೂನ್ 17 ರವರೆಗೆ ತನಿಖೆ ನಡೆಸದಂತೆ ತಡೆ ನೀಡಿತು.

Kannada Bar & Bench
kannada.barandbench.com