ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಲೈಂಗಿಕ ಕಿರುಕುಳ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಆರೋಪಟ್ಟಿಯನ್ನು ಪರಿಗಣಿಸಿರುವ ದೆಹಲಿ ನ್ಯಾಯಾಲಯ ಜುಲೈ 18ರಂದು ಹಾಜರಾಗುವಂತೆ ಬ್ರಿಜ್ ಭೂಷಣ್ ಅವರಿಗೆ ಸಮನ್ಸ್ ನೀಡಿದೆ.
ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರು ಸಮನ್ಸ್ ಜಾರಿಗೊಳಿಸಿದ್ದು, ಒಕ್ಕೂಟದಿಂದ ಅಮಾನತುಗೊಂಡಿರುವ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್‌ಗೆ ಕೂಡ ಸಮನ್ಸ್ ಜಾರಿಗೊಳಿಸಲಾಗಿದೆ.
ಬ್ರಿಜ್ ಭೂಷಣ್ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354 (ಮಹಿಳೆಯರ ಘನತೆಗೆ ಚ್ಯುತಿ ತರುವುದು), 354A (ಲೈಂಗಿಕ ಛಾಯೆಯ ಟೀಕೆಗಳನ್ನು ಮಾಡುವುದು), 354D (ಹಿಂಬಾಲಿಸುವಿಕೆ) ಮತ್ತು 506 (1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವ ಕುರಿತಂತೆ ಕುಸ್ತಿಪಟುಗಳು ದೆಹಲಿಯಲ್ಲಿ ನಡೆಸಿದ್ದ ಪ್ರತಿಭಟನೆ ದೇಶವ್ಯಾಪಿ ಗಮನಸೆಳೆದಿತ್ತು. ಪ್ರತಿಭಟನೆಯ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಎಫ್‌ಐಆರ್ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆನಂತರವಷ್ಟೇ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲಿಸಲು ವಿಳಂಬ ತೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿತ್ತು.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಅಪ್ರಾಪ್ರೆ ಕುಸ್ತಿಪಟು ಆನಂತರ ತನ್ನ ದೂರು ಹಿಂಪಡೆದಿದ್ದರು. ಹೀಗಾಗಿ ದೆಹಲಿ ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ರದ್ದತಿ ವರದಿ ಸಲ್ಲಿಸಿದ್ದರು.