ಪೋಕ್ಸೋ ಪ್ರಕರಣ: ಬಿಎಸ್‌ವೈ ಬಂಧಿಸಿ ವಿಚಾರಣೆ ನಡೆಸಲು ಕೋರಿ ಹೈಕೋರ್ಟ್‌ಗೆ ಸಂತ್ರಸ್ತೆಯ ಸಹೋದರನಿಂದ ಅರ್ಜಿ ಸಲ್ಲಿಕೆ

ಯಡಿಯೂರಪ್ಪ ಸಂತ್ರಸ್ತೆಯನ್ನು ಕೈಹಿಡಿದು ಕೊಠಡಿಯೊಂದಕ್ಕೆ ಕರೆದೊಯ್ದಿದ್ದರು. ವಿಚಾರಿಸುವ ನೆಪದಲ್ಲಿ ಸಂತ್ರಸ್ತೆಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
BSY
BSY
Published on

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರಿಗೆ ನಿರ್ದೇಶಿಸಲು ಕೋರಿ ಪ್ರಕರಣದ ದೂರುದಾರೆಯ ಪುತ್ರ ಕರ್ನಾಟಕ ಹೈಕೊರ್ಟ್‌ ಮೊರೆ ಹೋಗಿದ್ದಾರೆ.

ದೂರುದಾರೆ ಪುತ್ರ ಬೆಂಗಳೂರಿನ ಬೇಗೂರು ನಿವಾಸಿ ಶಶಾಂಕ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ನಗರ ಪೊಲೀಸ್‌ ಆಯುಕ್ತರು, ಸಿಐಡಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು ಪ್ರಕರಣದಲ್ಲಿ ಆರೋಪಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಮನವಿಯಲ್ಲೇನಿದೆ: ಪ್ರಕರಣದಲ್ಲಿ 17 ವರ್ಷದ ಸಂತ್ರಸ್ತೆಯು ನನ್ನ ಸಹೋದರಿಯಾಗಿದ್ದು, ದೂರುದಾರೆ ತಾಯಿಯಾಗಿದ್ದಾರೆ. ಸಂತ್ರಸ್ತೆಯು ತಾಯಿ ಜೊತೆಗೆ 2024ರ ಫೆಬ್ರವರಿ 2ರಂದು ಸಹಾಯ ಕೇಳಿಕೊಂಡು ಬೆಂಗಳೂರಿನ ಆರ್‌ಎಂವಿ ಎರಡನೇ ಹಂತದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದರು. ಈ ವೇಳೆ ಯಡಿಯೂರಪ್ಪ ಸಂತ್ರಸ್ತೆಯನ್ನು ಕೈ ಹಿಡಿದು ಕೊಠಡಿಯೊಂದಕ್ಕೆ ಕರೆದೊಯ್ದಿದ್ದರು. ವಿಚಾರಿಸುವ ನೆಪದಲ್ಲಿ ಸಂತ್ರಸ್ತೆಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ಸಹೋದರ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂದುವರೆದು, ನಂತರ ಸಂತ್ರಸ್ತೆ ಯಡಿಯೂರಪ್ಪ ಅವರನ್ನು ದೂರಕ್ಕೆ ನೂಕಿ ಕೊಠಡಿ ಬಾಗಿಲು ತೆರೆದು ಕಿರುಚಾಡಿಕೊಂಡು ಹೊರ ಬಂದಿದ್ದಾರೆ. ಘಟನೆ ಕುರಿತು ತಾಯಿಗೆ ವಿವರಿಸಿದ್ದಾರೆ. ತಾಯಿ ಘಟನೆ ಕುರಿತು ಪ್ರಶ್ನಿಸಿದ್ದಕ್ಕೆ ಅವರಿಗೆ ಹಣ ನೀಡಲು ಯಡಿಯೂರಪ್ಪ ಮುಂದಾಗಿದ್ದರು. ಹಣ ಸ್ವೀಕರಿಸಲು ತಾಯಿ ನಿರಾಕರಿಸಿದ್ದಾರೆ. ಘಟನೆ ಕುರಿತು 2024ರ ಮಾರ್ಚ್‌ 14ರಂದು ಸದಾಶಿವನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ಗೆ ತಾಯಿ ದೂರು ನೀಡಿದ್ದರು. ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್‌ 354(ಎ) ಅಡಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು ಎಂದು ಅರ್ಜಿದಾರರು ವಿವರಿಸಿದ್ದಾರೆ.

ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ಏಪ್ರಿಲ್‌ 2ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ತನ್ನ ತಾಯಿ ಮನವಿ ಪತ್ರ ಸಲ್ಲಿಸಿದ್ದರು. ಏಪ್ರಿಲ್‌ 29ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರಿಗೆ ಪತ್ರ ನೀಡಿ ಯಡಿಯೂರಪ್ಪ ಅವರನ್ನು ಬಂಧಿಸಲು ಕೋರಿದ್ದರು ಎಂದು ಸಂತ್ರಸ್ತೆಯ ಸಹೋದರ ಉಲ್ಲೇಖಿಸಿದ್ದಾರೆ.

ಮೇ 20ರಂದು ಸಿಐಡಿ ಎಡಿಜಿಪಿ ಬಿ ಕೆ ಸಿಂಗ್‌ ಅವರಿಗೆ ಪತ್ರ ನೀಡಿದ್ದಾರೆ. ಮಾರ್ಚ್‌ 26ರಂದು 25ನೇ ಎಸಿಎಂಎಂ ನ್ಯಾಯಾಲಯವು ಸಂತ್ರಸ್ತೆಯ ಸ್ವಯಂ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ತನಿಖಾಧಿಕಾರಿಯು ಧ್ವನಿ ದಾಖಲಾಗಿದ್ದ ಮೊಬೈಲ್‌ ಜಪ್ತಿ ಮಾಡಿದ್ದಾರೆ. ತನಿಖಾಧಿಕಾರಿಯು ಯಡಿಯೂರಪ್ಪ ಅವರಿಗೆ ನೋಟಿಸ್‌ ನೀಡಿದ್ದು, ಅವರ ಧ್ವನಿ ಮಾದರಿಯನ್ನೂ ಸಹ ಸಂಗ್ರಹಿಸಿದ್ದಾರೆ. ದೂರು ದಾಖಲಾಗಿ ಎರಡು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಕೊನೆಪಕ್ಷ ವಿಚಾರಣೆಗೆ ಹಾಜರಾಗಲು ಸೂಚಿಸಿ ಪೋಕ್ಸೊ ಕಾಯಿದೆ ಸೆಕ್ಷನ್‌ 41(ಎ) ಅಡಿಯಲ್ಲಿ ನೋಟಿಸ್‌ ಸಹ ನೀಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ಸತ್ಯಾಂಶ ತಿಳಿಸಬೇಕು. ಅಗತ್ಯವಿರುವ ಸಿಸಿಟಿವಿ ದೃಶ್ಯಗಳು, ಮೆಮೊರಿ ಕಾರ್ಡ್‌ ಮತ್ತು ಹಾರ್ಡ್‌ ಡಿಸ್ಕ್‌ ಅನ್ನು ವಶಪಡಿಸಿಕೊಳ್ಳಬೇಕು. ತನಿಖೆಯನ್ನು ಚುರುಕುಗೊಳಿಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸಲು ಸೂಚಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತರು ಮತ್ತು ಸಿಐಡಿ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com