ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಜಾಮೀನು ರದ್ದತಿ ಕೋರಿ ಜಮ್ಮು ಕಾಶ್ಮೀರ ಹೈಕೋರ್ಟ್ ಮೊರೆಹೋದ ವಾಯುಪಡೆ ಮಹಿಳಾ ಪೈಲಟ್

ಪ್ರಧಾನ ಸೆಷನ್ಸ್ ನ್ಯಾಯಾಲಯ ಆರೋಪಿಯ ವಿಚಾರಣೆಗೂ ಅವಕಾಶ ನೀಡದೆ ಮನಸೋಇಚ್ಛೆಯಿಂದ ಮತ್ತು ಯಾಂತ್ರಿಕವಾಗಿ ಬಂಧನ ಪೂರ್ವ ಜಾಮೀನು (ನಿರೀಕ್ಷಣಾ ಜಾಮೀನು) ನೀಡಿದೆ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ.
High Court of Jammu & Kashmir
High Court of Jammu & Kashmir

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಸೆಷನ್ಸ್‌ ನ್ಯಾಯಾಲಯ ಆರೋಪಿ ಫ್ಲೈಟ್‌ ಕಮಾಂಡರ್‌ಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮಹಿಳಾ ಪೈಲಟ್‌ ಒಬ್ಬರು ರಾಜ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಉಚ್ಚ ನ್ಯಾಯಾಲಯ, ಫ್ಲೈಟ್‌ ಕಮಾಂಡರ್‌ ಹಾಗೂ ಕೇಂದ್ರಾಡಳಿತ ಪ್ರದೇಶದ ಪ್ರತಿಕ್ರಿಯೆ ಕೇಳಿದೆ.

ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರಿದ್ದ ಏಕ-ಸದಸ್ಯ ಪೀಠ ಮೇ 14 ರಂದು ಪ್ರತಿವಾದಿಗಳಿಗೆ ನೋಟಿಸ್ ನೀಡಿದ್ದು ನಾಲ್ಕು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಕೃತ್ಯ ಜಾಮೀನು ನೀಡಲಾಗದ ಅಪರಾಧವಾಗಿದ್ದರೂ ಆರೋಪಿಗಳ ವಿರುದ್ಧ ಪೊಲೀಸರು ಜಾಮೀನು ನೀಡಬಹುದಾದ ಐಪಿಸಿ ಸೆಕ್ಷನ್ 354-ಎ ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅರ್ಜಿದಾರರ ಪರ ವಕೀಲರಾದ ಎ ಕೆ ಸಾಹ್ನಿ “ಪ್ರಧಾನ ಸೆಷನ್ಸ್‌ ನ್ಯಾಯಾಲಯ ಆರೋಪಿಯ ವಿಚಾರಣೆಗೂ ಅವಕಾಶ ನೀಡದೆ ಮನಸೋಇಚ್ಛೆಯಿಂದ ಮತ್ತು ಯಾಂತ್ರಿಕವಾಗಿ ಬಂಧನ ಪೂರ್ವ ಜಾಮೀನು (ನಿರೀಕ್ಷಣಾ ಜಾಮೀನು) ನೀಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಗಹನತೆಯ ಬಗ್ಗೆ ಕಣ್ಣೆತ್ತಿಯೂ ನೋಡದ ಸೆಷನ್ಸ್‌ ನ್ಯಾಯಾಧೀಶರು ಮಹಿಳೆಯರ ವಿರುದ್ಧ ನಡೆಯುವ ಕೃತ್ಯಗಳ ಬಗ್ಗೆ ಸೂಕ್ಷ್ಮವಾಗಿ ವರ್ತಿಸಿಲ್ಲ. 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶ ಧ್ವನಿ ಎತ್ತಿದ್ದರಿಂದ ಕಾನೂನುಗಳಿಗೆ ತಿದ್ದುಪಡಿ ತಂದಿದ್ದರೂ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಸಾಮಾನ್ಯ ಕ್ರಿಮಿನಲ್‌ ಅಪರಾಧದಂತೆ ಪರಿಗಣಿಸಿದೆ. ಆರೋಪಿಯ ಸ್ಥಾನಮಾನಗಳನ್ನು ಪರಿಗಣಿಸದೆ ಆತನಿಗೆ ಜಾಮೀನು ನೀಡಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಈ ಸಂಬಂಧ ಆರೋಪಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಿದೆ.

Related Stories

No stories found.
Kannada Bar & Bench
kannada.barandbench.com