
ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡದ ಆರೋಪದ ಮೇಲೆ ಬಂಧಿತರಾಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ಡಿ ದೇವರೇಜೇಗೌಡ ಅವರನ್ನು ಹೊಳೆನರಸೀಪುರ ನ್ಯಾಯಾಲಯವು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಹೊಳೆನರಸೀಪುರ ಟೌನ್ ಠಾಣೆಯ ಪೊಲೀಸರು ಸೋಮವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್ ಸಿದ್ದರಾಮ ಅವರಿಗೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ದೇವರೇಜೇಗೌಡರನ್ನು ಮೇ 16ವರೆಗೆ ಪೊಲೀಸ್ ಕಸ್ಟಡಿ ನೀಡಿದ್ದಾರೆ.
ಮೇ 11ರಂದು ದೇವರಾಜೇಗೌಡ ಬಂಧನವಾಗಿತ್ತು. ಅಂದು ಪ್ರಕರಣದ ಮಾಹಿತಿ ಪಡೆದಿದ್ದ ನ್ಯಾಯಾಲಯವು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಪ್ರಕರಣದ ಹಿನ್ನೆಲೆ: ಹತ್ತು ತಿಂಗಳ ಹಿಂದೆ ಪರಿಚಯವಾಗಿದ್ದ ದೇವರಾಜೇಗೌಡ ಆಗಾಗ ಫೋನ್ ಮಾಡಿ ಹೊಳೆನರಸೀಪುರದಲ್ಲಿ ಮನೆ ಕಟ್ಟಿಸಿಕೊಡುತ್ತೇನ ಎಂದು ನಂಬಿಸಿ ಹಾಸನಕ್ಕೆ ಕರೆದೊಯ್ದು ದೈಹಿಕವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ನಂತರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಪೆನ್‌ಡ್ರೈವ್ ಹಂಚಿಕೆಯ ಹಿಂದೆ ದೇವರಾಜೇಗೌಡ ಪಾತ್ರ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ತನಿಖೆ ನಡೆಯುವ ಸಾಧ್ಯತೆ ದಟ್ಟವಾಗಿದೆ.