“ಪುರುಷ-ಪತ್ನಿಯ ನಡುವಿನ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎನ್ನಬಹುದೇ?” ಚರ್ಚೆಗೆ ಗ್ರಾಸ ಒದಗಿಸಿದ ಸಿಜೆಐ ಪ್ರಶ್ನೆ

“ವಿವಾಹವಾಗುವುದಾಗಿ ಸುಳ್ಳು ಹೇಳುವುದು ಸರಿಯಲ್ಲ. ವಿವಾಹವಾಗುವುದಾಗಿ ನಂಬಿಸಿ, ಅದನ್ನು ಮುರಿಯಬಾರದು. ಆದರೆ, ಲೈಂಗಿಕ ಸಂಭೋಗದ ಕ್ರಿಯೆ ಅತ್ಯಾಚಾರ ಎಂದು ಹೇಳುವುದಕ್ಕಿಂತ ಭಿನ್ನವಾಗಿದೆ” ಎಂದು ಸಿಜೆಐ ನೇತೃತ್ವದ ಪೀಠ ಹೇಳಿದೆ.
Supreme Court
Supreme Court

ಕಾನೂನಾತ್ಮಕವಾಗಿ ವಿವಾಹವಾಗಿರುವ ಪುರುಷ ಮತ್ತು ಪತ್ನಿಯ ನಡುವಿನ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎನ್ನಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಪ್ರಶ್ನಿಸುವ ಮೂಲಕ ಅತ್ಯಾಚಾರದ ಸುತ್ತಲಿನ ಚರ್ಚೆಗೆ ಮತ್ತೊಮ್ಮೆ ಗ್ರಾಸ ಒದಗಿಸಿದ್ದಾರೆ.

ಎರಡು ವರ್ಷಗಳ ಕಾಲ ತನ್ನ ಜೊತೆ ಲಿವ್ ಇನ್ ಸಂಬಂಧ ಹೊಂದಿದ್ದ ವ್ಯಕ್ತಿಯ ವಿರುದ್ಧ ಮಹಿಳೆಯು ಹೂಡಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸೋಮವಾರ ನ್ಯಾಯಾಲಯ ನಡೆಸಿತು. ಪುರುಷ ಮತ್ತೊಬ್ಬ ಮಹಿಳೆಯನ್ನು ವಿವಾಹ ಮಾಡಿಕೊಂಡ ನಂತರ ಲಿವ್ ಇನ್‌ ಸಂಬಂಧ ಹೊಂದಿದ್ದ ಮಹಿಳೆಯು ಪುರುಷನ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ.

ಎಫ್‌ಐಆರ್‌ ರದ್ದತಿ ಕೋರಿ ಮನವಿದಾರ ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್‌ ಹೈಕೋರ್ಟ್‌ 2019ರಲ್ಲಿ ವಜಾಗೊಳಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. " ಒಂದು ಜೋಡಿಯು ಪುರುಷ ಮತ್ತು ಪತ್ನಿಯಾಗಿ ಒಟ್ಟಾಗಿ ಜೀವಿಸುತ್ತಿದ್ದು, ಪತಿ ಕ್ರೂರವಾಗಿ ನಡೆದುಕೊಂಡಿದ್ದರೂ ಕಾನೂನಾತ್ಮಕವಾಗಿ ವಿವಾಹವಾದ ಪತಿ ಮತ್ತು ಪತ್ನಿಯ ನಡುವಿನ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎನ್ನಬಹುದೇ” ಎಂಬ ಪ್ರಶ್ನೆಯನ್ನು ಸಿಜೆಐ ಬೊಬ್ಡೆ ವಿಚಾರಣೆಯ ಸಂದರ್ಭದಲ್ಲಿ ಮುಂದಿರಿಸಿದರು.

ಉತ್ತರ ಪ್ರದೇಶ ಮೂಲದ ದಂಪತಿಯು ರೊಮ್ಯಾಂಟಿಕ್‌ ಸಂಬಂಧ ಹೊಂದಿದ್ದರು. ಆದರೆ, ವಿವಾಹದವರೆಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಾಗಿ ದೂರುದಾರೆ ಆರೋಪಿಸಿದ್ದರು. ಆದರೆ ಅದಕ್ಕೆ ಸಮ್ಮತಿಯನ್ನು ವಂಚನೆಯ ಮೂಲಕ ಪಡೆದುಕೊಳ್ಳಲಾಯಿತು. 2014ರ ಫೆಬ್ರವರಿಯಲ್ಲಿ ಈ ಜೋಡಿಯು ಮನಾಲಿಗೆ ತೆರಳಿದ್ದರು. ಅಲ್ಲಿನ ಹಿಡಿಂಬಾ ದೇವಾಲಯದಲ್ಲಿ ಜೋಡಿಯು ವಿವಾಹವಾಗಿತ್ತು ಎಂದು ಮಹಿಳೆಯರ ಪರ ವಕೀಲ ಆದಿತ್ಯ ವಶಿಷ್ಠನಾಥ್‌ ವಾದಿಸಿದರು.

ಮನಾಲಿಯಲ್ಲಿ ವಿವಾಹ ನಡೆದಿಲ್ಲ. ಲಿವ್‌ ಇನ್‌ ಸಂಬಂಧವು ಒಪ್ಪಿತ ಮಾತ್ರವಾಗಿತ್ತು ಎಂದು ಪುರುಷ ಹೇಳಿದ್ದು, ಮಹಿಳೆಯ ಆರೋಪವನ್ನು ಅವರು ನಿರಾಕರಿಸಿದ್ದರು. ವಂಚನೆಯ ಮೂಲಕ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ಪಡೆಯಲಾಗಿದೆ. ದೇವಸ್ಥಾನದಲ್ಲಿ ನಡೆಯುವ ವಿವಾಹ ನೈಜ ಎಂದು ತಾನು ನಂಬಿದ್ದಾಗಿ ಮಹಿಳೆ ವಾದಿಸಿದ್ದಾರೆ.

“ವಿವಾಹವಾಗುವುದಾಗಿ ಸುಳ್ಳು ಹೇಳುವುದು ಸರಿಯಲ್ಲ. ವಿವಾಹವಾಗುವುದಾಗಿ ನಂಬಿಸಿ, ಅದನ್ನು ಮುರಿಯಬಾರದು. ಆದರೆ, ಲೈಂಗಿಕ ಸಂಭೋಗದ ಕ್ರಿಯೆ ಅತ್ಯಾಚಾರ ಎಂದು ಹೇಳುವುದಕ್ಕಿಂತ ಭಿನ್ನವಾಗಿದೆ” ಎಂದು ಸಿಜೆಐ ನೇತೃತ್ವದ ಪೀಠ ಹೇಳಿದೆ. ಈ ವಿಚಾರವನ್ನು ಹಿಂದೆಯೇ ನ್ಯಾಯಾಲಯ ಇತ್ಯರ್ಥಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಆರೋಪಿಯು ತನ್ನ ಜೊತೆ ಕ್ರೂರವಾಗಿ ವರ್ತಿಸಿದ್ದು, ಆತನ ದೌರ್ಜನ್ಯದಿಂದಾಗಿ ತನ್ನ ಗುಪ್ತಾಂಗಗಳಿಗೆ ಪೆಟ್ಟಾಗಿತ್ತು, ಆಸ್ಪತ್ರೆಗೂ ಭೇಟಿ ನೀಡಬೇಕಾಯಿತು. ಮತ್ತೊಂದು ಸಂದರ್ಭದಲ್ಲಿ ಕಾಲಿಗೂ ಪೆಟ್ಟಾಗಿತ್ತು ಎಂದು ಆಕೆ ಆರೋಪಿಸಿದ್ದಾರೆ.

Also Read
ಇದು ಅತ್ಯಾಚಾರ ಮತ್ತು ಕೊಲೆಗಳಿಗೆ ನ್ಯಾಯಾಲಯ ತಡೆಯಾಜ್ಞೆ ಜಾರಿಗೊಳಿಸಬೇಕು ಎಂದ ಹಾಗಿದೆ: ಸುಪ್ರೀಂ ಕೋರ್ಟ್

“ಹಾಗಾದಲ್ಲಿ ನೀವು ದೌರ್ಜನ್ಯ ಮತ್ತು ವೈವಾಹಿಕ ಹಿಂಸೆ ಅಡಿ ದೂರು ದಾಖಲಿಸಿ. ಇದಕ್ಕೆ ಅತ್ಯಾಚಾರ ಪ್ರಕರಣ ಏಕೆ ದಾಖಲಿಸಿದ್ದೀರಿ?” ಎಂದು ಸಿಜೆಐ ಪ್ರಶ್ನಿಸಿದರು. 'ಮದುವೆಯ ಸಂಬಂಧ'ದಲ್ಲಿನ ದುರುಪಯೋಗವನ್ನು ಅತ್ಯಾಚಾರ ಎಂದು ಪರಿಗಣಿಸಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.

ಮಹಿಳೆಯು ಹಿಂದೆಯೂ ಇಂಥ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿ ಪರ ವಕೀಲ ವಿಭಾ ದತ್ತ ಮಖಿಜಾ ಹೇಳಿದರು. “ಇದು ಈ ಮಹಿಳೆಯ ಹವ್ಯಾಸವಾಗಿದೆ. ಕಚೇರಿಯಲ್ಲಿ ಆಕೆ ಮತ್ತಿಬ್ಬರ ಜೊತೆ ಇದೇ ರೀತಿ ನಡೆದುಕೊಂಡಿದ್ದಾರೆ” ಎಂದಿದ್ದಾರೆ.

ಮಹಿಳೆಯು ಹಣಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ನೀಡಲು ಆರೋಪಿ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376, 504 ಮತ್ತು 506 ಅಡಿ ಆಕೆ ದೂರು ದಾಖಲಿಸಿದ್ದಾರೆ ಎಂದು ದೂರಲಾಗಿದೆ. ಆರೋಪಿಗೆ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಪೀಠವು ಎಫ್‌ಐಆರ್‌ ವಜಾಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದೆ.

Related Stories

No stories found.
Kannada Bar & Bench
kannada.barandbench.com