ಭಾರತೀಯ ದಂಡ ಸಂಹಿತೆ-1860ರ ಅಡಿಯ ಅಪರಾಧಗಳ ತನಿಖೆಯಿಂದ ಅಥವಾ ಕಾನೂನು ಪ್ರಕಾರ 'ಹೆಚ್ಚಿನ ತನಿಖೆ' ನಡೆಸುವುದರಿಂದ ಗಂಭೀರ ವಂಚನೆ ತನಿಖಾ ಕಚೇರಿಯನ್ನು (ಎಸ್ಎಫ್ಐಒ) ತಡೆಹಿಡಿದಿಲ್ಲ ಎಂದು ದೆಹಲಿ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ .
ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ಮತ್ತಿತರರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎಸ್ಎಫ್ಐಒ ಸಲ್ಲಿಸಿದ್ದ ತನಿಖಾ ವರದಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಮಿತ್ ಶರ್ಮಾ ಈ ವಿಚಾರ ತಿಳಿಸಿದರು.
"ಸಿಆರ್‌ಪಿಸಿ ಮತ್ತು ಪ್ರಸ್ತುತ ಕಾಯಿದೆಯ ಸಂಬಂಧಿತ ನಿಯಮಾವಳಿಗಳ ಸಂಯೋಜಿತ ಮತ್ತು ಸಹವಾಚನದಿಂದ, ಇಲ್ಲಿ ಉಲ್ಲೇಖಿಸಿದಂತೆ, ಎಸ್ಎಫ್ಐಒ ಅನ್ನು ಐಪಿಸಿ ಅಡಿಯ ಅಪರಾಧದ ತನಿಖೆಯಿಂದ ನಿರ್ಬಂಧಿಸಲಾಗಿದೆ ಎಂದು ಹೇಳಲಾಗದು. ಮತ್ತು ಎಸ್ಎಫ್ಐಒ ಕಾನೂನಿಗೆ ಅನುಗುಣವಾಗಿ 'ಹೆಚ್ಚಿನ ತನಿಖೆ' ನಡೆಸುವುದನ್ನು ತಡೆಹಿಡಿದಿಲ್ಲ" ಎಂದು ನ್ಯಾಯಾಲಯ ವಿವರಿಸಿತು.
ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಸ್ಎಫ್ಐಒಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನೀಡಿದ ಅನುಮತಿ ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದರು. ಜೊತೆಗೆ ಎಸ್ಎಫ್ಐಒ ದೂರು ಮತ್ತು ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸನ್ನೂ ಪ್ರಶ್ನಿಸಿದ್ದರು.
ಕಂಪನಿಗಳ ಕಾಯಿದೆ- 2013ರ ಸೆಕ್ಷನ್ 219 (ಡಿ) ಅಡಿಯಲ್ಲಿ (ಸಂಬಂಧಿತ ಕಂಪನಿಗಳ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವ ತನಿಖಾಧಿಕಾರಿಯ ಅಧಿಕಾರ) ಮೊದಲ ಅರ್ಜಿದಾರರು ಕಾಯಿದೆಯ ಸೆಕ್ಷನ್ 2 (51) ರ ಪ್ರಕಾರ 'ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ' ಆಗಿರುವುದರಿಂದ ಕೇಂದ್ರ ಸರ್ಕಾರದ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ವಿಚಾರಣಾ ನ್ಯಾಯಾಲಯ ಹೊರಡಿಸಿದ ಸಮನ್ಸ್ ಆದೇಶ ಬದಿಗೆ ಸರಿಸಲು ನಿರಾಕರಿಸಿದ ನ್ಯಾಯಾಲಯ "2ನೇ ಅರ್ಜಿದಾರರ ವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ ಎಂದು ದೂರಿನಲ್ಲಿಯೇ ಉಲ್ಲೇಖಿಸಿರುವುದರಿಂದ, ಅದು ಕಾಯಿದೆಯ ಸೆಕ್ಷನ್ 219ರ ನಿಯಮಾವಳಿಯಡಿ ಬರುತ್ತದೆ. ಆದರೂ, ಅಂತಹ ಪೂರ್ವಾನುಮತಿ ತೆಗೆದುಕೊಳ್ಳದಿರುವುದರಿಂದ 2ನೇ ಅರ್ಜಿದಾರರ ವಿರುದ್ಧ ವಿಶೇಷ ನ್ಯಾಯಾಲಯ ತೆಗೆದುಕೊಂಡ ಪರಿಗಣನೆಯನ್ನು ಅಮಾನ್ಯಗೊಳಿಸಲಾಗದು" ಎಂದು ಹೇಳಿದೆ.
ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿಲ್ಲವಾದರೂ ಕಂಪನಿಗಳ ಕಾಯಿದೆ- 2013ರಲ್ಲಿ ತಿಳಿಸಿರುವಂತೆ ತನಿಖಾ ವರದಿಯನ್ನು ಪೊಲೀಸ್ ವರದಿ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ತನಿಖಾ ವರದಿ ಸಲ್ಲಿಸುವ ಅಧಿಕಾರಿಯನ್ನು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ಪೀಠ ಸ್ಪಷ್ವಪಡಿಸಿತು.
ಈ ನಿಟ್ಟಿನಲ್ಲಿ, ನ್ಯಾ. ಶರ್ಮಾ, "ಪ್ರಸ್ತುತ ಕಾಯಿದೆಯಡಿ ತನಿಖೆಯ ಸಮಯದಲ್ಲಿ, ಸಂಬಂಧಪಟ್ಟ ತನಿಖಾಧಿಕಾರಿ ಐಪಿಸಿ ಅಥವಾ ತನಿಖೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ನಡೆದಿರುವುದನ್ನು ಕಂಡರೆ, ಅದು ಬೇರೆ ತನಿಖೆ ನಡೆಸಲು ಕಾರಣವಾಗುವುದಿಲ್ಲ. ಅಂತಹ ತನಿಖೆಯನ್ನು ಸಿಆರ್‌ಪಿಸಿ ಸೆಕ್ಷನ್ 4 (1)ರ ಅಡಿಯಲ್ಲಿ ನಡೆಸಬಹುದು. ನಂತರ ಸಲ್ಲಿಸಲಾದ ವರದಿಯನ್ನು ಸಿಆರ್‌ಪಿಸಿ ಸೆಕ್ಷನ್ 173 (2) ರ ಅಡಿಯಲ್ಲಿ ಪೊಲೀಸ್ ವರದಿ ಎಂದು ಪರಿಗಣಿಸಬೇಕಾದರೆ, ಇಲ್ಲಿ ವಿವರಿಸಿದಂತೆ, ಅಧಿಕಾರಿಗೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯ ಅಧಿಕಾರವನ್ನು ನೀಡಲಾಗಿದೆ ಎಂದು ಪರಿಗಣಿಸತಕ್ಕದ್ದು" ಎಂದರು.
ಅಂತೆಯೇ, ಅಪರಾಧ ಪ್ರಕ್ರಿಯಾ ಸಂಹಿತೆ, 1973 ಮತ್ತು ಕಂಪನಿಗಳ ಕಾಯಿದೆಯ ನಿಬಂಧನೆಗಳನ್ನು ಓದಿದಾಗ ಭಾರತೀಯ ದಂಡ ಸಂಹಿತೆ-1860ರ ಅಡಿಯಲ್ಲಿ ಅಪರಾಧದ ತನಿಖೆಯಿಂದ ಎಸ್ಎಫ್ಐಒ ಅನ್ನು ನಿರ್ಬಂಧಿಸಲಾಗಿದೆ ಎಂದು ಹೇಳಲಾಗದು ಎಂದು ನ್ಯಾಯಾಲಯ ತಿಳಿಸಿದೆ.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]