ಎಕ್ಸ್‌ನಲ್ಲಿ ʼಸುಪ್ರೀಂ ಕೋರ್ಟ್‌ ಆಫ್‌ ಕರ್ನಾಟಕ ಖಾತೆʼ ಇದೆ ಎಂದ ಮೆಹ್ತಾ; ಡಿಲೀಟ್‌ ಮಾಡಲಾಗಿದೆ ಎಂದ ರಾಘವನ್‌

“ಕಾನೂನುಬಾಹಿರ ವಿಷಯವನ್ನು ಪರಿಶೀಲಿಸಲು ಸಹಯೋಗ್‌ ಪೋರ್ಟಲ್‌ ಕನಿಷ್ಠ ಕ್ರಮವಾಗಿದೆ. ಇಂಟರ್ನೆಟ್‌ನ ವಿಕಸನದೊಂದಿಗೆ ಪ್ರಸ್ತುತಪಡಿಸಲಾದ ಹೊಸ ಸಮಸ್ಯೆಗಳನ್ನು ನಿಭಾಯಿಸಲು ಇಂತಹ ಹೊಸ ಪರಿಹಾರಗಳು ಅಗತ್ಯವಾಗಿದೆ” ಎಂದು ಸಮರ್ಥಿಸಿದ ಎಸ್‌ಜಿ ಮೆಹ್ತಾ.
Karnataka High Court and X corp
Karnataka High Court and X corp
Published on

ಸುಪ್ರೀಂ ಕೋರ್ಟ್‌ ಆಫ್‌ ಕರ್ನಾಟಕ ಹೆಸರಿನಲ್ಲಿ ನಕಲಿ ಖಾತೆ ತೆರೆಯಲು ಎಕ್ಸ್‌ ಅನುಮತಿಸಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ಆಪಾದಿಸಿದರು.

ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರವು ಸಹಯೋಗ್‌ ಪೋರ್ಟಲ್‌ ಆರಂಭಿಸಿರುವುದನ್ನು ಹಾಗೂ ಅದನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna
Justice M Nagaprasanna

ಕೇಂದ್ರ ಸರ್ಕಾರದ ಪರ ವಾದ ಮುಂದುವರಿಸಿದ ತುಷಾರ್‌ ಮೆಹ್ತಾ ಅವರು ಅನಾಮಧೇಯತೆಯ ಅಪಾಯಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪಾದಕೀಯ ಹೊಣೆಗಾರಿಕೆಯ ಕೊರತೆಯ ಬಗ್ಗೆ ಪೀಠಕ್ಕೆ ವಿವರಿಸಿದರು.

ಮೆಹ್ತಾ ಅವರು “ಆಡಳಿತಾತ್ಮಕ ಅನುಕೂಲಕ್ಕಾಗಿ ಸಹಯೋಗ್ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಎಲ್ಲಾ ಆನ್‌ಲೈನ್ ಮಧ್ಯಸ್ಥಿಕೆ ಸಂಸ್ಥೆಗಳು ತಮ್ಮ ವೇದಿಕೆಗಳಲ್ಲಿ ಯಾವುದೇ ಕಾನೂನುಬಾಹಿರ ವಿಷಯದ ಕುರಿತು ಅಧಿಕೃತ ಅಧಿಕಾರಿಗಳಿಂದ ಬರುವ ಸೂಚನೆಗಳ ಮೇಲೆ ಸುಲಭವಾಗಿ ನಿಗಾ ಇಡಬಹುದು. ಇದು ವ್ಯವಹಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಈ ಕಾರ್ಯವಿಧಾನವನ್ನು ಎಕ್ಸ್ ಕಾರ್ಪ್ ಏಕೆ ಪ್ರಶ್ನಿಸುತ್ತಿದೆ” ಎಂದರು.

“ಕಾನೂನುಬಾಹಿರ ವಿಷಯವನ್ನು ಪರಿಶೀಲಿಸಲು ಸಹಯೋಗ್‌ ಪೋರ್ಟಲ್‌ ಕನಿಷ್ಠ ಕ್ರಮವಾಗಿದೆ. ಇಂಟರ್ನೆಟ್‌ನ ವಿಕಸನದೊಂದಿಗೆ ಪ್ರಸ್ತುತಪಡಿಸಲಾದ ಹೊಸ ಸಮಸ್ಯೆಗಳನ್ನು ನಿಭಾಯಿಸಲು ಇಂತಹ ಹೊಸ ಪರಿಹಾರಗಳು ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಖಾತೆ ಸೃಷ್ಟಿಸುವುದು ಸುಲಭವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ ಮೆಹ್ತಾ ಅವರು ಇದಕ್ಕಾಗಿ ಸುಪ್ರೀಂ ಕೋರ್ಟ್‌ ಆಫ್‌ ಕರ್ನಾಟಕ ಎಂಬ ಎಕ್ಸ್‌ ಖಾತೆ ತೆರೆದಿರುವುದನ್ನು ಉದಾಹರಿಸಿದರು.

“ಸುಪ್ರೀಂ ಕೋರ್ಟ್‌ ಆಫ್‌ ಕರ್ನಾಟಕ ಎಂಬ ಹೆಸರಿನಲ್ಲಿ ಒಂದು ಖಾತೆಯಿದೆ. ಇದು ಎಕ್ಸ್‌ನ ಪರಿಶೀಲಿಸಲ್ಪಟ್ಟ ಖಾತೆಯಾಗಿದೆ. ಇದರಲ್ಲಿ ಏನು ಬೇಕಾದರೂ ಪೋಸ್ಟ್‌ ಮಾಡಬಹುದಾಗಿದ್ದು, ಇದನ್ನು ನೋಡುವ ಲಕ್ಷಾಂತರ ಜನರು ಸುಪ್ರೀಂ ಕೋರ್ಟ್‌ ಆಫ್‌ ಕರ್ನಾಟಕ ಇದನ್ನು ಹೇಳಿದೆ ಎಂದು ಹೇಳಬಹುದು. ಇಷ್ಟಾಗ್ಯೂ ಅವರು ಅನಾಮಧೇಯ ಅಥವಾ ಗುಪ್ತನಾಮದಲ್ಲಿ ಉಳಿಯಬಹುದು… ಇಂಥ ಖಾತೆಯೊಂದಿದೆ ಎಂಬುದನ್ನು ತೋರಿಸುವ ಉದ್ದೇಶ ನಮ್ಮದಾಗಿದೆ” ಎಂದು ನ್ಯಾಯಾಲಯದ ಸ್ಕ್ರೀನ್‌ಶಾಟ್‌ ಅನ್ನು ಪೀಠಕ್ಕೆ ತೋರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ವಕೀಲ ಕೆ ಜಿ ರಾಘವನ್‌ ಅವರು “ಅನಾಮಧೇಯತೆ ಕಳವಳ ಇದ್ದು, ಆನ್‌ಲೈನ್‌ಗೆ ಅದು ವಿಶೇಷವೇನಲ್ಲ. ಸುಪ್ರೀಂ ಕೋರ್ಟ್‌ ಆಫ್‌ ಕರ್ನಾಟಕ ಖಾತೆಯನ್ನು ಎಕ್ಸ್‌ ವೆರಿಫೈ ಮಾಡಿದೆ” ಎಂಬುದನ್ನು ನಿರಾಕರಿಸಿದರು. ಅಲ್ಲದೇ, ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಎಕ್ಸ್‌ ಕಾರ್ಪ್‌ ಪೀಠಕ್ಕೆ ತಿಳಿಸಿದರು.

ಈ ಮಧ್ಯೆ, ಮೆಹ್ತಾ ಅವರು “ಎಕ್ಸ್‌ ಕಾರ್ಪ್‌ ಕೃತಕ, ವಿದೇಶಿ ಸಂಸ್ಥೆಯಾಗಿದ್ದು, ಅದು ಸಂವಿಧಾನದ 19 (1)(a) ಮತ್ತು 21ನೇ ವಿಧಿಯಡಿ ಹಕ್ಕು ಚಲಾಯಿಸಲಾಗದು. ಹೀಗಾಗಿ, ಎಕ್ಸ್‌ ಕಾರ್ಪ್‌ ಅರ್ಜಿಯು ಊರ್ಜಿತವಾಗುವುದಿಲ್ಲ” ಎಂದರು.

ಮುಂದುವರಿದು ಮೆಹ್ತಾ ಅವರು “ಕಾನೂನುಬಾಹಿರ ವಿಚಾರದ ಮಾಹಿತಿಯನ್ನು ಮಧ್ಯಸ್ಥ ವೇದಿಕೆ ಸಂಸ್ಥೆಗೆ ಒದಗಿಸಲು ಸಹಯೋಗ್‌ ಪೋರ್ಟಲ್‌ ರೂಪಿಸಲಾಗಿದೆ. ಅದನ್ನು ತೆಗೆಯಬೇಕೆ ಅಥವಾ ಬೇಡವೇ ಎಂಬುದು ಮಧ್ಯಸ್ಥ ಸಂಸ್ಥೆಗೆ ಬಿಟ್ಟ ವಿಚಾರ. ಮಧ್ಯಸ್ಥ ಸಂಸ್ಥೆಯು ಅದನ್ನು ತೆಗೆಯದಿದ್ದರೆ ತನ್ನ ಸುರಕ್ಷತಾ ಕವಚವನ್ನು ಕಳೆದುಕೊಳ್ಳಲಿದೆ” ಎಂದರು.

Also Read
ತೀರ್ಪುಗಳನ್ನು ಬರೆಯಲು ಕೃತಕ ಬುದ್ಧಿಮತ್ತೆ ಬಳಕೆ ಮಾಡುವುದು ಅಪಾಯಕಾರಿ: ನ್ಯಾ. ನಾಗಪ್ರಸನ್ನ

“ಎಕ್ಸ್‌ ತಾನು ವೇದಿಕೆ ಎಂದು ಹೇಳುತ್ತದೆ. ಅದರಲ್ಲಿ ಅದರ ಧ್ವನಿ ಇರುವುದಿಲ್ಲ. ಹೀಗಾಗಿ, 19(1)(a)ನೇ ವಿಧಿಯಡಿ ಅದು ವಾಕ್‌ ಸ್ವಾತಂತ್ರ್ಯದ ಹಕ್ಕು ಚಲಾಯಿಸಲಾಗದು. ಬೇರೆ ಕಾರಣಕ್ಕಾಗಿ ಗಂಭೀರ ಪರಿಣಾಮ ಪದ ಸೃಷ್ಟಿಸಲಾಗಿದ್ದು, ವಾದ ಮಂಡಿಸಲು ಯಾವುದೇ ವಿಚಾರ ಇಲ್ಲದಿದ್ದಾಗ ಅದನ್ನು ಬಳಕೆ ಮಾಡಲಾಗುತ್ತಿದೆ” ಎಂದು ಸಮರ್ಥಿಸಿದರು.

ಇನ್ನು ಲಿಖಿತ ವಾದದಲ್ಲಿ ಮೆಹ್ತಾ ಅವರು “ವಾಕ್‌ ಸ್ವಾತಂತ್ರ್ಯಕ್ಕೆ ಸರ್ಕಾರದಿಂದಲ್ಲ ಖಾಸಗಿ ಸಂಸ್ಥೆಗಳಾದ ಎಕ್ಸ್‌ ಕಾರ್ಪ್‌ನಂಥವುಗಳಿಂದ ಗಂಭೀರ ಬೆದರಿಕೆ ಇದೆ” ಎಂದು ವಾದಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜುಲೈ 25ಕ್ಕೆ ನಿಗದಿಪಡಿಸಲಾಗಿದೆ.

Kannada Bar & Bench
kannada.barandbench.com