ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ವಕೀಲ ಫೈಜಾನ್ ಖಾನ್‌ನನ್ನು ಮುಂಬೈ ನ್ಯಾಯಾಲಯ ಗುರುವಾರ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಮುಂಬೈ ಪೊಲೀಸರು ನವೆಂಬರ್ 12 ರಂದು ರಾಯಪುರದಲ್ಲಿ ಫೈಜಾನ್ ಖಾನ್‌ನನ್ನು ಬಂಧಿಸಿದ್ದರು. ಛತ್ತೀಸ್‌ಗಢ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದು ಆತನನ್ನು ಅಲ್ಲಿಂದ ಮುಂಬೈಗೆ ಕರೆತರಲಾಗಿತ್ತು.
ಮುಂಬೈ ಪೊಲೀಸರು ಗುರುವಾರ ಆರೋಪಿಯನ್ನು ಬಾಂದ್ರಾದ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಏಳು ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿದ್ದರು ಎಂದು ವರದಿಯಾಗಿದೆ.
ಕರೆಯ ಬೆನ್ನತ್ತಿದ್ದ ಮುಂಬೈ ಪೊಲೀಸರು ನವೆಂಬರ್ 7 ರಂದು ರಾಯಪುರಕ್ಕೆ ದೌಡಾಯಿಸಿದ್ದರು. ಫೈಜಾನ್ ಖಾನ್ ಸಿಕ್ಕನಾದರೂ ನವೆಂಬರ್ 2ರಂದೇ ತನ್ನ ಫೋನ್ ಕಳೆದುಹೋಗಿದ್ದು ಅಪರಿಚಿತರು ಬೆದರಿಕೆ ಹಾಕಿದ್ದಾರೆ ಎಂದಿದ್ದ.
ಮುಂಬೈ ಪೊಲೀಸರೆದುರು ಹಾಜರಾಗಲು ಫೈಜಾನ್ ನಿರಾಕರಿಸಿದ್ದ. ಮಂಗಳವಾರ ರಾಯ್‌ಪುರದ ಪಾಂಡ್ರಿ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಬೆದರಿಕೆಗಳೊಂದಿಗೆ ಈ ಬೆದರಿಕೆಯನ್ನು ಆರಂಭದಲ್ಲಿ ತಳಕು ಹಾಕಲಾಗಿತ್ತು.