ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು ಹಾಗೂ ತನ್ನ ಪತ್ನಿ ಶಾಕೆರೆ ಖಲೀಲಿ ಅವರನ್ನು ದಶಕಗಳ ಹಿಂದೆ ಹತ್ಯೆ ಮಾಡಿದ ಪ್ರಕರಣಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 82 ವರ್ಷದ ಅಪರಾಧಿ ಸ್ವಘೋಷಿತ ದೇವಮಾನವ ಮುರಳಿ ಮನೋಹರ್ ಮಿಶ್ರಾ ಅಲಿಯಾಸ್ ಸ್ವಾಮಿ ಶ್ರದ್ಧಾನಂದ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ [ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರಳಿ ಮನೋಹರ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಿ ಯಾವುದೇ ಪರಿಹಾರ ಪಡೆಯಲು ಅವಕಾಶ ಕಲ್ಪಿಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಬಿ ವಿ ನಾಗರತ್ನ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅರ್ಜಿ ಹಿಂಪಡೆಯಲು ಅನುಮತಿಸಿತು.
ಕಳೆದ 30 ವರ್ಷಗಳಿಂದ ಜೈಲಿನಲ್ಲಿರುವ ಅಪರಾಧಿ ಶ್ರದ್ಧಾನಂದ ಸಲ್ಲಿಸಿದ್ದ ವಿವಿಧ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಶ್ರದ್ಧಾನಂದನ ಒಂದು ಮನವಿ ಮಧ್ಯಂತರ ವೈದ್ಯಕೀಯ ಜಾಮೀನು ಕೋರಿದ್ದರೆ ಮತ್ತೊಂದು ಅರ್ಜಿ ಪೆರೋಲ್‌ಗೆ ಮನವಿ ಮಾಡಿತ್ತು. ಮೂರನೇ ಅರ್ಜಿ ತನ್ನ ಪಾತಕ ಲೋಕದ ಬದುಕನ್ನು ಆಧರಿಸಿ, ಅಮೆಜಾನ್ ಪ್ರೈಮ್‌ನಲ್ಲಿ ಮೂಡಿಬರುತ್ತಿರುವ ಹೊಸ ಸಾಕ್ಷ್ಯಚಿತ್ರ ಸರಣಿ ʼಡ್ಯಾನ್ಸಿಂಗ್ ಆನ್ ದ ಗ್ರೇವ್ʼನ ಪ್ರಸಾರಕ್ಕೆ ತಡೆ ನೀಡುವಂತೆ ಕೋರಿತ್ತು.
ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿ ಪತ್ನಿ ಶಾಕೆರೆ ಹೆಸರಿನಲ್ಲಿದ್ದ 600 ಕೋಟಿ ರೂಪಾಯಿ ಮೊತ್ತದ ಆಸ್ತಿಗಾಗಿ ಆಕೆಯನ್ನು ಜೀವಂತ ಸಮಾಧಿ ಮಾಡಿದ ಪ್ರಕರರಣದದಲ್ಲಿ ಶ್ರದ್ಧಾನಂದ ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣದ ಮೇಲೆ ಸಾಕ್ಷ್ಯಚಿತ್ರ ಸರಣಿ ಪೂರ್ವಾಗ್ರಹ ಉಂಟು ಮಾಡುತ್ತದೆ ಎಂಬುದು ಶ್ರದ್ಧಾನಂದನ ವಾದವಾಗಿತ್ತು.
ತನ್ನ ರೋಗಗ್ರಸ್ತ ಸಹೋದರನನ್ನು ಭೇಟಿ ಮಾಡಲು ಮಧ್ಯಂತರ ಜಾಮೀನು ಕೋರಿ 2010ರಲ್ಲಿ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದ. ಆದರೆ ಆನಂತರ ಆ ಸಹೋದರ ತೀರಿಹೋಗಿದ್ದಾರೆ ಎಂದು ಕರ್ನಾಟಕ ಸರ್ಕಾರದ ಪರ ವಕೀಲರು ಶ್ರದ್ಧಾನಂದ ಸಲ್ಲಿಸಿರುವ ಮನವಿ ವಿರೋಧಿಸಿದರು.
ಶ್ರದ್ಧಾನಂದ ರಾಜ್ಯಪಾಲರು ತನ್ನ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿಲ್ಲ. ಕರ್ನಾಟಕ ಅಥವಾ (ಈಗ ಅವನು ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ) ಮಧ್ಯಪ್ರದೇಶದ ಪೆರೋಲ್ ನಿಯಮಗಳನ್ನು ಮಂಡಿಸಿಲ್ಲ ಎಂದು ತಿಳಿಸಲಾಯಿತು.
ಕಕ್ಷಿದಾರರ ವಾದವನ್ನು ಆಲಿಸಿದ ಪೀಠ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ಸುಪ್ರೀಂ ಕೋರ್ಟ್ ಈಗಾಗಲೇ ಕ್ಷಮಾದಾನದ ಕುರಿತಾಗಿ ಸ್ಪಷ್ಟ ಆದೇಶಗಳನ್ನು ನೀಡಿರುವುದರಿಂದ ಈ ಕುರಿತು ಪರಿಹಾರ ಕೋರಿರುವ ಮನವಿಯನ್ನು ಸದ್ಯಕ್ಕೆ ಆಲಿಸುವುದಿಲ್ಲ ಎಂದು ಅದು ಮೌಖಿಕವಾಗಿ ಹೇಳಿತು. ಸಂತ್ರಸ್ತ ಕುಟುಂಬದ ಪರ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದರು.