ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡ ಕೌಸಲ್ಯ ಅವರ ಮೊದಲ ಪತಿ ಶಂಕರ್ ಸ್ಮರಣಾರ್ಥ ಸಭೆ ನಡೆಸಲು ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ [ಕೌಸಲ್ಯ ಮತ್ತು ಸರ್ಕಾರ ನಡುವಣ ಪ್ರಕರಣ].
ಶಂಕರ್ ಪುಣ್ಯತಿಥಿಯ ದಿನವಾದ ಮಾರ್ಚ್ 12 ರಂದು ಉಡುಮಲ್ ಪೇಟೆಯ ಬಸ್ ನಿಲ್ದಾಣದ ಬಳಿ ಸಭೆ ನಡೆಸಲು ಅವರ ಪತ್ನಿಯಾಗಿದ್ದ ಕೌಸಲ್ಯ ಅವರಿಗೆ ಅನುಮತಿ ನೀಡುವಂತೆ ನ್ಯಾಯಮೂರ್ತಿ ಜಿ ಚಂದ್ರಶೇಖರನ್ ಅವರು ತಿರುಪ್ಪೂರ್ ಜಿಲ್ಲಾ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಇಂತಹ ಸಭೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಬಹುದು ಎಂಬ ತಮಿಳುನಾಡು ಸರ್ಕಾರದ ಆತಂಕಕ್ಕೆ ನ್ಯಾಯಾಲಯ ಆಸ್ಪದ ನೀಡಲಿಲ್ಲ.
ತಮಿಳುನಾಡಿನಾದ್ಯಂತ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆಯುತ್ತಿರುವ ಸಂದರ್ಭದಲ್ಲೇ ಕೌಸಲ್ಯ ಅವರು ಅಂತಹ ಹಿಂಸಾಚಾರ ಮತ್ತು ಮರ್ಯಾದೆಗೇಡು ಹತ್ಯೆಯ ವಿರುದ್ಧ ಧ್ವನಿ ಎತ್ತಲು ಮುಂದಾಗಿರುವುದು ಶ್ಲಾಘನೀಯ ಎಂದು ನ್ಯಾ. ಜಿ ಚಂದ್ರಶೇಖರನ್ ಹೇಳಿದ್ದಾರೆ.
ಪ್ರಬಲ ತೇವರ್ ಸಮುದಾಯದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೌಸಲ್ಯ ಅದೇ ಕಾಲೇಜಿನಲ್ಲಿ ದಲಿತ ಸಮುದಯಾದ ವಿದ್ಯಾರ್ಥಿಯಾಗಿದ್ದ ಶಂಕರ್ ವೇಲುಸಾಮಿ ಎಂಬುವವರನ್ನು ಮದುವೆಯಾಗಿದ್ದರು. ಶಂಕರ್ ಅವರನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಾರ್ಚ್ 13, 2016ರಂದು ಅವರಿಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು. ದಾಳಿಯಿಂದ ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಕೌಸಲ್ಯ ಅವರಿಗೆ ತೀವ್ರ ಗಾಯಗಳಾಗಿದ್ದವು.
ಶಂಕರ್ ಅವರ ಎರಡನೇ ಪುಣ್ಯತಿಥಿಯಂದು, ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಜಾಗೃತಿ ಮೂಡಿಸಲು, ಅಂತರ್ಜಾತೀಯ ವಿವಾಹ ಉತ್ತೇಜಿಸಲು ಹಾಗೂ ಅಂತರ್ಜಾತಿ ವಿವಾಹವಾದ ದಂಪತಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಶಂಕರ್ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿದ್ದಾರೆ ಕೌಸಲ್ಯ.