ಗಡಿಯಾರದ ಚಿಹ್ನೆ ಕುರಿತ ಆದೇಶ ಪಾಲಿಸದ ಅಜಿತ್: ಸುಪ್ರೀಂ ಕದ ತಟ್ಟಿದ ಶರದ್ ಪವಾರ್

ಆದೇಶ ಪಾಲಿಸದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶರದ್ ಪವಾರ್ ನ್ಯಾಯಾಲಯದ ಆದೇಶ ಪಾಲಿಸುವ ಬದಲು ಅಜಿತ್ ಅವರ ಬಣ ಆದೇಶ ಸಡಿಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ ಎಂದು ಗಮನ ಸೆಳೆದಿದ್ದಾರೆ.
Sharad Pawar, Ajit Pawar and Supreme Courtfacebook
Sharad Pawar, Ajit Pawar and Supreme Courtfacebook
Published on

ಎನ್‌ಸಿಪಿ ಅಜಿತ್ ಪವಾರ್ ಬಣಕ್ಕೆ ನೀಡಲಾಗಿರುವ ಗಡಿಯಾರದ ಚಿಹ್ನೆ ನಾಯ್ಯಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಜಾಹೀರಾತುಗಳಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ಈ ಹಿಂದಿನ ಆದೇಶ ಪಾಲಿಸಲು ಅದು ವಿಫಲವಾಗಿದೆ ಎಂದು ಆರೋಪಿಸಿ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.

ಆದೇಶ ಪಾಲಿಸದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶರದ್ ಪವಾರ್ ನ್ಯಾಯಾಲಯದ ಆದೇಶವನ್ನು ಪಾಲಿಸುವ ಬದಲು ಅಜಿತ್ ಪವಾರ್ ಅವರ ಬಣ ಆದೇಶ ಸಡಿಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ ಎಂದು ಗಮನ ಸೆಳೆದಿದ್ದಾರೆ. ಚುನಾವಣೆ ಸಮೀಪಿಸುತ್ತಿದೆ, ಹೀಗಿರುವಾಗ ಈ ರೀತಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

ಆದರೆ, ಅಜಿತ್‌ ಪವಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು ಸುಪ್ರೀಂ ಕೋರ್ಟ್‌ ಪ್ರಕರಣ ನಿರ್ಧರಿಸಿದೆ ಎಂದು ಹೇಳುವುದು ಸರಿಯಲ್ಲ. ನ್ಯಾಯಾಲಯದ ಹಿಂದಿನ ಆದೇಶದ ಕೊನೆಯ ಸಾಲಿಗೆ ಮಾರ್ಪಾಡು ಮಾಡಬೇಕು ಎಂದು ಮನವಿ ಮಾಡಿದರು.

ಹಿಂದಿನ ಆದೇಶದ ಕೊನೆಯ ಸಾಲಿನಂತೆ, ಪ್ರತಿವಾದಿಗಳ ಪರವಾಗಿ ನೀಡಲಾಗುವ ಪ್ರತಿಯೊಂದು ಕರಪತ್ರ, ಜಾಹೀರಾತು, ಆಡಿಯೋ ಅಥವಾ ವೀಡಿಯೊ ಕ್ಲಿಪ್‌ಗಳಲ್ಲಿ ಗಡಿಯಾರ ಚಿಹ್ನೆ ನ್ಯಾಯಾಂಗ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಘೋಷಣೆ ಮಾಡಬೇಕು ಎಂದು ಕೋರಿದರು.

ಆದರೆ ಮಾರ್ಪಾಡು ಕೋರಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌, ಮತದಾನದ ಮುಕ್ತಾಯದವರೆಗೆ ಆದೇಶ ಜಾರಿಯಲ್ಲಿರಬೇಕು ಎಂದು ಸೂಚಿಸಿತು.

ನ್ಯಾಯಾಲಯವು ಇಲ್ಲಿಯವರೆಗೆ ನೀಡಲಾದ ಜಾಹೀರಾತುಗಳ ವಿವರಗಳನ್ನು ಕೇಳಿದ್ದು ಶರದ್ ಪವಾರ್ ಅವರ ಅರ್ಜಿ ವಿಚಾರಣೆ ಬಗ್ಗೆ ನಂತರ ನಿರ್ಧರಿಸುವುದಾಗಿ ತಿಳಿಸಿತು.

ಅಜಿತ್‌ ಪವಾರ್‌ ಬಣ ಕಳೆದ ಜುಲೈನಲ್ಲಿ ಬಂಡೆದ್ದ ಪರಿಣಾಮ ಎನ್‌ಸಿಪಿ ಎರಡು ಹೋಳಾಗಿತ್ತು. ಅಜಿತ್ ಪವಾರ್ ಬಣ ಪ್ರಸ್ತುತ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಏಕನಾಥ್ ಶಿಂಧೆ ಸರ್ಕಾರವನ್ನು ಬೆಂಬಲಿಸುತ್ತಿದೆ.

ಅಜಿತ್‌ ಪವಾರ್‌ ಪರವಾಗಿ ಅತ್ಯಧಿಕ ಎನ್‌ಸಿಪಿ ಶಾಸಕರು ನಿಂತಿದ್ದರಿಂದ ಈ ಬಣವೇ ನಿಜವಾದ ಎನ್‌ಸಿಪಿ ಎಂದು ಇತ್ತೀಚೆಗೆ ಭಾರತದ ಚುನಾವಣಾ ಆಯೋಗ ಘೋಷಿಸಿತ್ತು.

ಇದನ್ನು ಪ್ರಶ್ನಿಸಿ ಅವರ ದೊಡ್ಡಪ್ಪ ಶರದ್ ಪವಾರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲ ಷರತ್ತು ವಿಧಿಸಿದ್ದ ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ರಾಜ್ಯ ಚುನಾವಣೆಗಳಿಗೆ ಪಕ್ಷದ ಗಡಿಯಾರ ಚಿಹ್ನೆಯನ್ನು ಬಳಸಲು ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ ಅನುಮತಿ ನೀಡಿತ್ತು.

ಗಡಿಯಾರ ಚಿಹ್ನೆಯನ್ನು ಅಜಿತ್‌ ಅವರ ಬಣಕ್ಕೆ ನೀಡಿದ್ದರೂ ಇದು ಸುಪ್ರೀಂ ಕೋರ್ಟ್‌ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಇದೇ ಪೀಠ ಆಗ ನುಡಿದಿತ್ತು.

ಎನ್‌ಸಿಪಿ ಬಣದ ಪರವಾಗಿ ಹೊರಡಿಸುವ ಕರಪತ್ತ, ಜಾಹೀರಾತು, ಆಡಿಯೊ ಮತ್ತು ವೀಡಿಯೊ ತುಣುಕುಗಳಲ್ಲಿ ಕೂಡ ಗಡಿಯಾರ ಚಿಹ್ನೆ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಹಕ್ಕು ತ್ಯಾಗದ ಮಾಹಿತಿ ಪ್ರಕಟಿಸಬೇಕು ಎಂದು ಕೂಡ ನ್ಯಾಯಾಲಯ ನಿರ್ದೇಶಿಸಿತ್ತು.

ಆದರೆ ಅಜಿತ್‌ ಅದನ್ನು ಪಾಲಿಸಿಲ್ಲ ಬದಲಿಗೆ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನವನ್ನೇ ಮಾರ್ಪಾಡು ಮಾಡಲು ಕೋರಿದ್ದಾರೆ  ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com