ಅಜಿತ್ ಬಣವೇ ನಿಜವಾದ ಎನ್‌ಸಿಪಿ: ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಶರದ್ ಪವಾರ್‌

ಶಾಸಕಾಂಗದಲ್ಲಿ ಹೊಂದಿರುವ ಬಹುಮತದ ಪರೀಕ್ಷೆಯ ತತ್ವ ಅನ್ವಯಿಸಿ ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಫೆ. 6ರಂದು ತೀರ್ಪು ನೀಡಿದ್ದ ಚುನಾವಣಾ ಆಯೋಗ ಗಡಿಯಾರ ಚಿಹ್ನೆ ಬಳಸಲು ಆ ಬಣಕ್ಕೆ ಅನುಮತಿ ನೀಡಿತ್ತು.
ಶರದ್ ಪವಾರ್, ಅಜಿತ್ ಪವಾರ್ ಮತ್ತು ಸುಪ್ರೀಂ ಕೋರ್ಟ್
ಶರದ್ ಪವಾರ್, ಅಜಿತ್ ಪವಾರ್ ಮತ್ತು ಸುಪ್ರೀಂ ಕೋರ್ಟ್

ತಮ್ಮ ಸೋದರಳಿಯ ಅಜಿತ್‌ ಪವಾರ್‌ ನೇತೃತ್ವದ ಬಣವೇ ನಿಜವಾದ 'ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ' ಎಂದು ಘೋಷಿಸಿದ ಭಾರತದ ಚುನಾವಣಾ ಆಯೋಗದ (ಇಸಿಐ) ನಿರ್ಧಾರ ಪ್ರಶ್ನಿಸಿ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್‌ ಪವಾರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶಾಸಕಾಂಗದಲ್ಲಿ ಹೊಂದಿರುವ ಬಹುಮತದ ಪರೀಕ್ಷೆಯ ತತ್ವ ಅನ್ವಯಿಸಿ ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಫೆ. 6ರಂದು ತೀರ್ಮಾನಿಸಿದ್ದ ಚುನಾವಣಾ ಆಯೋಗ ಗಡಿಯಾರ ಚಿಹ್ನೆ ಬಳಸಲು ಆ ಬಣಕ್ಕೆ ಅನುಮತಿ ನೀಡಿತ್ತು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು ಎನ್‌ಸಿಪಿ ಶಾಸಕರ ಸಂಖ್ಯೆ 81. ಈ ಪೈಕಿ ಅಜಿತ್ ಪವಾರ್ ಅವರ ಪರವಾಗಿ 57 ಶಾಸಕರು ಅಫಿಡವಿಟ್ ಸಲ್ಲಿಸಿದ್ದರೆ, ಶರದ್ ಪವಾರ್ ಪರ ಕೇವಲ 28 ಎಂಎಲ್‌ಎಗಳು ಅಫಿಡವಿಟ್‌ ನೀಡಿದ್ದರು.

ಈ ಹಿನ್ನೆಲೆಯಲ್ಲಿ, ಅಜಿತ್ ಪವಾರ್ ನೇತೃತ್ವದ ಗುಂಪು ಶಾಸಕರ ಬಹುಮತದ ಬೆಂಬಲವನ್ನು ಹೊಂದಿದ್ದು ಆ ಬಣವೇ ನಿಜವಾದ ಎನ್‌ಸಿಪಿ ಎಂದು ಹಕ್ಕು ಸಾಧಿಸಬಹುದು ಎಂಬುದಾಗಿ ಆಯೋಗ ನಿರ್ಧರಿಸಿತ್ತು.

ಪಕ್ಷದ ಸಾಂಸ್ಥಿಕ ರಚನೆ, ಅದರ ಸದಸ್ಯರು ಮತ್ತು ಅವರು ಸ್ಪರ್ಧಿಸಿದ ಚುನಾವಣೆಗಳ ವಿವರಗಳಿಗೆ ಯಾವುದೇ ಆಧಾರ ಇಲ್ಲದಿರುವುದು ಕಂಡುಬಂದದ್ದರಿಂದ ಪಕ್ಷದ ಸಾಂಸ್ಥಿಕ ವಿಭಾಗದಲ್ಲಿ ಬಹುಮತ ಪರೀಕ್ಷೆ ನಡೆಸಲು ಕೋರಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತು. ಇದನ್ನು ಈಗ ಸುಪ್ರೀಂ ಕೋರ್ಟ್‌ನಲ್ಲಿ ಶರದ್‌ ಪವಾರ್‌ ಪ್ರಶ್ನಿಸಿದ್ದಾರೆ.

Kannada Bar & Bench
kannada.barandbench.com