ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆ ಟೆಂಡರ್‌: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ

ಐದು ವರ್ಷ ಯೋಜನಾ ಅವಧಿ ಸುಮಾರು ₹ 8,000 ಕೋಟಿ ಮೊತ್ತದ ಬೃಹತ್ ಯೋಜನೆಗೆ ಕೇವಲ 21 ದಿನಗಳ ಟೆಂಡರ್ ಅಖೈರುಗೊಳಿಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದ ಪಾರಾಗಲು ತರಾತುರಿಯ ಟೆಂಡರ್ ಅಂತಿಮಗೊಳಿಸಲಾಗುತ್ತಿದೆ ಎಂದು ಆಕ್ಷೇಪ.
Karnataka High Court
Karnataka High Court
Published on

ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಯ ಟೆಂಡರ್‌ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಲಾರ್ಸೆನ್ ಅಂಡ್ ಟೂಬ್ರೋ (ಎಲ್‌ ಅಂಡ್‌ ಟಿ) ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ತುರ್ತು ವಿಚಾರಣೆ ನಡೆಸಲು ಮಾಡಿದ ಮನವಿ ಮೇರೆಗೆ ವಿಚಾರಣೆ ಕೈಗೆತ್ತಿಕೊಂಡ ಪೀಠವು ಟೆಂಡರ್‌ನ ಲೆಟರ್‌ ಆಫ್ ಅವಾರ್ಡ್ ಅಮಾನತ್ತಿನಲ್ಲಿಡಲು ಪ್ರತಿವಾದಿ ಕೆಪಿಸಿಎಲ್‌ಗೆ ಸೂಚನೆ ನೀಡಿತು.

ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ಪ್ರತಿ ಇನ್ನೂ ಲಭ್ಯವಾಗದ ಹಿನ್ನೆಲೆಯಲ್ಲಿ ಗುತ್ತಿಗೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳಲು ವಿಭಾಗೀಯ ಪೀಠ ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರ ಎಲ್ ಅಂಡ್ ಟಿ ಸಂಸ್ಥೆ ಪರ ವಾದಿಸಿದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆಯ ಪ್ರಕಾರ ಟೆಂಡರ್ ಗೆ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ ಅದಕ್ಕೆ ವಿರುದ್ಧವಾಗಿ ಕೇವಲ 21 ದಿನಗಳ ಟೆಂಡರ್ ನೀಡಲಾಗುತ್ತಿದೆ. ಕೆಪಿಸಿಎಲ್‌ನಿಂದ ಕೆಲ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ನೀಡಲಾಗುತ್ತಿದೆ” ಎಂದರು.

“ಐದು ವರ್ಷ ಯೋಜನಾ ಅವಧಿ ಸುಮಾರು ₹8,000 ಕೋಟಿ ಮೊತ್ತದ ಬೃಹತ್ ಯೋಜನೆಗೆ ಕೇವಲ 21 ದಿನಗಳ ಟೆಂಡರ್ ಅಖೈರುಗೊಳಿಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದ ಪಾರಾಗಲು ತರಾತುರಿಯ ಟೆಂಡರ್ ಅಂತಿಮಗೊಳಿಸಲಾಗುತ್ತಿದೆ. ಆದರೆ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿದಾರರ ಈ ವಾದವನ್ನು ತಿರಸ್ಕರಿಸಿದೆ. ಏಕಸದಸ್ಯಪೀಠದ ಆದೇಶದ ಪ್ರತಿಯೂ ದೊರೆತಿಲ್ಲ. ಹೀಗಾಗಿ ಮಧ್ಯಂತರ ತಡೆ ನೀಡಬೇಕು” ಎಂದರು.

ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “30 ದಿನಗಳ ಟೆಂಡರ್ ಅವಧಿಯನ್ನು ಕಡಿತಗೊಳಿಸಲು ಪ್ರಾಧಿಕಾರಕ್ಕೆ ಅಧಿಕಾರವಿದೆ. ಈಗಾಗಲೇ ಬಿಡ್ ತೆರೆಯಲಾಗಿದ್ದು ಲೆಟರ್‌ ಆಫ್ ಅವಾರ್ಡ್ ಕೂಡ ನೀಡಲಾಗಿದೆ. ತಡೆ ನೀಡಬಾರದು” ಎಂದು ಮನವಿ ಮಾಡಿದರು.

“ಎಲ್ ಆಂಡ್ ಟಿ ಕಂಪೆನಿ ಟೆಂಡರ್ ನಿಯಮಗಳಲ್ಲಿ ಬದಲಾವಣೆ ಮಾಡಿ 30 ದಿನಗಳ ಅವಧಿಯನ್ನು 21 ದಿನಗಳಿಗೆ ಇಳಿಸಿದ ಕ್ರಮವನ್ನು ಪ್ರಶ್ನಿಸಿ ಏಕಸದಸ್ಯ ಪೀಠದ ಮೊರೆ ಹೋಗಿತ್ತು. ಆದರೆ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಕಂಪೆನಿಯ ವಾದವನ್ನು ತಿರಸ್ಕರಿಸಿತಲ್ಲದೆ, ಅರ್ಜಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅಲ್ಲದೇ, ಟೆಂಡರ್ ಕರೆಯುವ ಪ್ರಾಧಿಕಾರಕ್ಕೆ ತನ್ನ ಅಗತ್ಯಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸಿಕೊಳ್ಳುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಹೀಗಾಗಿ, ಅರ್ಜಿಯನ್ನು ಮಾನ್ಯ ಮಾಡಲಾಗದು” ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕಂಪೆನಿ ವಿಭಾಗೀಯ ಪೀಠದ ಮೊರೆ ಹೋಗಿದೆ.

Kannada Bar & Bench
kannada.barandbench.com