ಪಾಕಿಸ್ತಾನದ ಐಎಸ್‌ಐನೊಂದಿಗೆ ಭಾರತದ ಭೂಸೇನೆ, ವಾಯುಸೇನೆ ಹಾಗೂ ನೌಕದಳದ ಮಾಹಿತಿ ಹಂಚಿಕೊಂಡ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಜಿತೇಂದರ್ ಸಿಂಗ್ ಎಂಬಾತನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.
ಜಾಮೀನು ಕೋರಿ ಜಿತೇಂದರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಬೆಂಗಳೂರಿನಿಂದ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಗುಪ್ತಚರ ದಳಕ್ಕೆ ಅರ್ಜಿದಾರ ಮಾಹಿತಿ ಹಂಚಿಕೊಂಡಿರುವುದು ದಾಖಲೆಯಿಂದ ಸ್ಪಷ್ಟವಾಗುತ್ತದೆ. ಅರ್ಜಿದಾರ ಸಂಗ್ರಹಿಸಿ ಹಂಚಿಕೊಂಡಿರುವ ಮಾಹಿತಿ ಭಾರತದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದ ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ, ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ” ಎಂದು ಅರ್ಜಿ ವಜಾಗೊಳಿಸಿದೆ.
“ಅರ್ಜಿದಾರರನ್ನು 2021ರ ನವೆಂಬರ್‌ನಲ್ಲಿ ಬಂಧಿಸಿದ್ದು, ಪೊಲೀಸರು ಅರ್ಜಿದಾರರಿಂದ ಸೇನಾ ಸಮವಸ್ತ್ರ, ವಾಟ್ಸ್ ಆ್ಯಪ್ ಸಂದೇಶ ಹಾಗೂ ಕೆಲ ಫೋಟೊ ಜಪ್ತಿ ಮಾಡಿದ್ದಾರೆ. ಫೋನ್ ಮೂಲಕ ಪಾಕಿಸ್ತಾನದ ಐಎಸ್‌ಐಗೆ ಸೇರಿದ ಪೂಜಾ ಮತ್ತು ನಕಾಶ್ ಎಂಬುವರನ್ನು ಸಂಪರ್ಕಿಸಿ, ಭಾರತೀಯ ಸೇನೆ, ವಾಯು ಹಾಗೂ ನೌಕದಳಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡಿದ್ದಾನೆ. ಪೊಲೀಸರು ಜಫ್ತಿ ಮಾಡಿರುವ 78 ಮೊಬೈಲ್ ಸಂದೇಶಗಳ ಪೈಕಿ 30 ಸಂದೇಶಗಳು ಪಾಕಿಸ್ತಾನದ ಗುಪ್ತದಳದ ಕಾರ್ಯನಿರ್ವಾಹಕರಿಂದ ಸ್ವೀಕರಿಸಿದ್ದಾನೆ. 24 ಸಂದೇಶಗಳು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ. 8 ಫೋಟೊ ಸ್ವೀಕರಿಸಿದ್ದು, ಪೂಜಾಗೆ ನಾಲ್ಕು ವಿಡಿಯೋ ಕರೆ ಮಾಡಿದ್ದಾನೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಬೆಂಗಳೂರಿನಿಂದ ಕಾರ್ಯಚರಣೆಯಲ್ಲಿ ತೊಡಗಿದ್ದ ಆರೋಪಿ ಅರ್ಜಿದಾರ ಪಾಕಿಸ್ತಾನದ ಗುಪ್ತಚರ ದಳಕ್ಕೆ ಮಾಹಿತಿ ಹಂಚಿಕೊಂಡಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಹಾಗಾಗಿ, ಪಾಕಿಸ್ತಾನ ಮಹಿಳೆಯೊಂದಿಗೆ ಅರ್ಜಿದಾರ ಕೇವಲ ಸಂಭಾಷಣೆ ಮಾಡುತ್ತಿದ್ದ ಎಂಬುದಾಗಿ ಹೇಳಲಾಗದು. ಅರ್ಜಿದಾರ ಒದಗಿಸಿರುವ ಮಾಹಿತಿ ಬಳಸಿ ಪಾಕಿಸ್ತಾನವು ತನ್ನ ನೆಲೆಯಿಂದ ಕ್ಷಿಪಣಿ ಬಳಸಿ ಭಾರತದ ಈ ಸೇನಾ ನೆಲೆಗಳನ್ನು ಗುರಿ ಮಾಡುವುದನ್ನು ಅಲ್ಲಗೆಳಯಲಾಗದು. ಅರ್ಜಿದಾರ ಸಂಗ್ರಹಿಸಿ ಹಂಚಿಕೊಂಡ ಮಾಹಿತಿ ಭಾರತದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದ ಸಮಗ್ರತೆ ಮತ್ತು ಸೌರ್ವಭೌಮತ್ವತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿದೆ.
“ಈ ಸಂದರ್ಭದಲ್ಲಿ ಅರ್ಜಿದಾರನಿಗೆ ಜಾಮೀನು ನೀಡಿದರೆ ಆತ ತಲೆಮರೆಸಿಕೊಳ್ಳುವ ಮತ್ತು ಪ್ರಕರಣದ ವಿಚಾರಣೆ ವಿಳಂಬವಾಗುವ ಸಾಧ್ಯತೆಯಿದೆ. ಜೈಲಿನಿಂದ ಹೊರಬಂದರೆ ಅರ್ಜಿದಾರ ಪ್ರಾಣಕ್ಕೂ ಅಪಾಯವಿದೆ. ದೇಶದ ಮತ್ತು ಅರ್ಜಿದಾರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಗೋಪಾಲ್ ಸಿಂಗ್ ಅವರು “ಅರ್ಜಿದಾರ ಅಮಾಯಕರಾಗಿದ್ದು, ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯೊಬ್ಬರು ಆತನ ಸಂಪರ್ಕಕ್ಕೆ ಬಂದಿದ್ದರು. ಆಕೆಯ ಪ್ರೀತಿ ಗಳಿಸಲು ಭಾರತೀಯ ಸೇನಾ ಸಮವಸ್ತವನ್ನು ಧರಿಸಿ ಸೈನಿಕ ಎಂದು ಬಿಂಬಿಸಿಕೊಂಡಿದ್ದಾನಷ್ಟೆ. ಪಾಕಿಸ್ತಾನದ ಪೂಜಾ ಎಂಬಾಕೆಯೊಂದಿಗೆ ಕೇವಲ ಚಾಟ್ ಮಾಡಿದ್ದಾನೆ. ಸಮವಸ್ತ್ರ ಹಾಕಿಕೊಂಡು ತೆಗೆಸಿರುವ ಫೋಟೊ ಹೊರತುಪಡಿಸಿ ಅರ್ಜಿದಾರನ ವಿರುದ್ಧದ ಆರೋಪವನ್ನು ಪುಷ್ಠೀಕರಿಸುವ ಯಾವುದೇ ದಾಖಲೆಗಳಿಲ್ಲ. ಹಾಗಾಗಿ, ಜಾಮೀನು ನೀಡಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಜಿತೇಂದರ್ ಸಿಂಗ್ ಎಂಬಾತ ಸೇನಾ ಸಮವಸ್ತ್ರ ಧರಿಸಿಕೊಂಡು ನೌಕಾದಳಕ್ಕೆ ಸಂಬಂಧಿಸಿದಂತೆ ಫೋಟೊ ಹಾಗೂ ಇತರೆ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನದ ಐಎಸ್‌ಐಗೆ ರವಾನಿಸಿದ್ದಾನೆ ಎಂದು ಆರೋಪಿಸಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ 2021ರ ಸೆಪ್ಟೆಂಬರ್ 19ರಂದು ಕಾಟನ್‌ಪೇಟೆ ಠಾಣೆಗೆ ದೂರು ನೀಡಿದ್ದರು.
ಇದನ್ನು ಆಧರಿಸಿ ಪೊಲೀಸರು 2021ರ ನವೆಂಬರ್ 19ರಂದು ಅರ್ಜಿದಾರರನ್ನು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಭಯೋತ್ಪಾದಕ ನಿಗ್ರಹ ದಳ ಮತ್ತು ಸಿಸಿಬಿ ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೀಗಾಗಿ, ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆರೋಪಿ ಹೈಕೋರ್ಟ್ ಕದ ತಟ್ಟಿದ್ದರು. ಹೈಕೋರ್ಟ್ ಸಹ ಜಾಮೀನು ಮನವಿ ವಜಾ ಮಾಡಿದೆ.