ಧರ್ಮಸ್ಥಳದ ಕುರಿತಾದ ವಿಡಿಯೋ: ಸಮೀರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಮಂಗಳೂರು ನ್ಯಾಯಾಲಯ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ಕುರಿತು ಕೃತ ಬುದ್ದಿಮತ್ತೆ ನೆರವಿನಿಂದ ತಯಾರಿಸಿದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಿದ ಆರೋಪದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಯೂಟ್ಯೂಬರ್ ಎಂ ಡಿ ಸಮೀರ್‌ಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸಮೀರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಸವರಾಜ್ ನಡೆಸಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಸಮೀರ್‌ರಿಂದ ರೂ. 75 ಸಾವಿರ ಭದ್ರತಾ ಠೇವಣಿ ಪಡೆದುಕೊಂಡು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಯು ಇಂತಹ ಅಪರಾಧ ಕೃತ್ಯ ಮುಂದುವರಿಸಬಾರದು, ತಲೆಮರೆಸಿಕೊಳ್ಳಬಾರದು. ಪ್ರಕರಣದ ಸಾಕ್ಷಿದಾರರಿಗೆ ಪ್ರಚೋದನೆ, ಪ್ರಲೋಭನೆ ಒಡ್ಡಬಾರದು, ಸಾಕ್ಷ್ಯ ನಾಶಪಡಿಸಬಾರದು. ಅಗತ್ಯ ಬಿದ್ದಾಗ ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹರಿಸಬೇಕು. ಪ್ರಕರಣದ ವಿಚಾರಣೆಯ ವೇಳೆ ಸಮೀರ್ ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಸಾಕ್ಷಿ ದೂರುದಾರ ನೀಡಿರುವ ದೂರಿನ ಆಧಾರದಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಕುರಿತು ಸುಮಾರು 24 ನಿಮಿಷದ ವಿಡಿಯೋವನ್ನು ಸಮೀರ್ ತನ್ನ ಧೂತ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಿದ್ದರು. ಜುಲೈ 12ರಂದು ಈ ವಿಡಿಯೋ ನೋಡಿದ್ದು, ಸಾಕ್ಷಿದಾರ ನೀಡಿದ ಮಾಹಿತಿಯನ್ನು ಗೌಪ್ಯವಾಗಿಟ್ಟು ತನಿಖೆ ನಡೆಸಲಾಗುತ್ತಿದೆ. ವಿಡಿಯೋ ಪರಿಶೀಲಿಸಿದಾಗ ಪ್ರಕರಣದ ದೂರುದಾರ ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿ ಹೊರತುಪಡಿಸಿ ಇನ್ನಷ್ಟು ಮಾಹಿತಿಯನ್ನು ಕಾಲ್ಪನಿಕವಾಗಿ ಸೃಷ್ಟಿಸಿರುವುದು ಕಂಡುಬಂದಿದೆ. ದೂರುದಾರನಿಗೆ 2018ರ ಸಾಕ್ಷಿ ಸಂರಕ್ಷಣೆ ಯೋಜನೆಯಡಿ ಭದ್ರತೆ ಒದಗಿಸಲಾಗಿದ್ದು, ಆತನ ಬಗ್ಗೆ ಮಾಹಿತಿ ಹಂಚಿಕೊಳ್ಳುವುದರಿಂದ ಗುರುತು ಬಹಿರಂಗವಾಗುತ್ತದೆ ಎಂದು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.