[ಶಾರ್ಜಿಲ್ ಇಮಾಮ್ ಜಾಮೀನು ಅರ್ಜಿ] ಕೆಳ ನ್ಯಾಯಾಲಯದ ನ್ಯಾಯಾಧೀಶರು ಯಾವುದನ್ನೂ ಪರಿಗಣಿಸಿಲ್ಲ ಎಂದ ದೆಹಲಿ ಹೈಕೋರ್ಟ್

ಕೆಳ ಹಂತದ ನ್ಯಾಯಾಲಯ ಜನವರಿಯಲ್ಲಿ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿತ್ತು. ಅಲ್ಲದೆ ದೇಶದ್ರೋಹ ಮತ್ತು ಯುಎಪಿಎ ಅಡಿ ಆರೋಪ ನಿಗದಿಪಡಿಸಿತ್ತು.
Sharjeel Imam

Sharjeel Imam

Published on

ಫೆಬ್ರವರಿ 2020ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಕುಮಾರ್ ಮೆಂಡಿರಟ್ಟ ಅವರಿದ್ದ ವಿಭಾಗೀಯ ಪೀಠ ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 24ಕ್ಕೆ ನಿಗದಿಪಡಿಸಿದೆ.

ಇಮಾಮ್‌ ಅವರಿಗೆ ಜಾಮೀನು ನಿರಾಕರಿಸಿದ ಕೆಳ ನ್ಯಾಯಾಲಯದ ಆದೇಶವು ಜಾಮೀನು ಮಂಜೂರು ಅಥವಾ ನಿರಾಕರಣೆಗೆ ಸಂಬಧಪಟ್ಟ ಯಾವುದನ್ನೂ ಪರಿಗಣಿಸಲು ಹೋಗಿಲ್ಲ ಎಂದು ಪೀಠ ಟೀಕಿಸಿತು.

Also Read
[ದೆಹಲಿ ಗಲಭೆ] ಖಾಲಿದ್‌ ಮತ್ತು ಇಮಾಂ ಸೈದ್ಧಾಂತಿಕವಾಗಿ ಒಗ್ಗೂಡಿದವರಲ್ಲ: ದೆಹಲಿ ನ್ಯಾಯಾಲಯಕ್ಕೆ ಖಾಲಿದ್ ವಕೀಲರ ಮಾಹಿತಿ

"ಅವರು (ಕೆಳ ನ್ಯಾಯಾಲಯದ ನ್ಯಾಯಾಧೀಶರು) ಏನನ್ನೂ ಮಾಡಿಲ್ಲ. ಈ ಎಲ್ಲಾ ಅಪರಾಧಗಳು 7 ವರ್ಷಗಳಿಗಿಂತ ಕಡಿಮೆ ಶಿಕ್ಷೆಗೆ ಅರ್ಹವಾದವು. ನಾವು ನಿಮ್ಮನ್ನು (ದೆಹಲಿ ಪೊಲೀಸರನ್ನು) ಕೇಳುತ್ತಿದ್ದೇವೆ, ಅವರಿಗೆ (ಶಾರ್ಜಿಲ್‌ಗೆ) ಏಕೆ ಜಾಮೀನು ನೀಡಬಾರದು? ಅವರು ದೇಶ ತೊರೆಯುತ್ತಾರೆಯೇ? ಸಾಕ್ಷ್ಯ ಹಾಳುಮಾಡುತ್ತಾರೆಯೇ? ಸಾಕ್ಷಿಗಳು ಯಾರು? ”ಎಂದು ನ್ಯಾಯಾಲಯ ದೆಹಲಿ ಪೊಲೀಸ್‌ ಪರ ವಕೀಲರನ್ನು ಪ್ರಶ್ನಿಸಿತು.

ಇಮಾಮ್‌ಗೆ ಜೀವಾವಧಿ ಶಿಕ್ಷೆ ನೀಡುವ ಐಪಿಸಿ ಸೆಕ್ಷನ್ 124 ಎ ಕೂಡ ವಿಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಪರ ವಕೀಲರು ಗಮನಸೆಳೆದಾಗ ನ್ಯಾಯಮೂರ್ತಿ ಮೃದುಲ್ “ದೇಶದ್ರೋಹದಂತಹ ಆರೋಪ ಮಾಡುವಾಗ ಹಿಂಸಾಚಾರಕ್ಕೆ ನಿರ್ದಿಷ್ಟ ಕರೆ ನೀಡಿರಬೇಕು” ಎಂದರು.

"ದೇಶದ್ರೋಹದ ಪ್ರಕರಣದಲ್ಲಿ ನ್ಯಾಯಾಲಯ ಬಹಳ ಹಿಂದೆಯೇ ವ್ಯವಹರಿಸಿದೆ.... ಇದನ್ನು ಮತ್ತೆ ಮೊದಲಿನಿಂದ ಸಂಶೋಧಿಸುವ ಅಗತ್ಯವಿಲ್ಲ. ಇದು ತುಂಬಾ ಸ್ಪಷ್ಟ... ಪ್ರಚೋದನೆ (ಹಿಂಸಾಚಾರದ) ನಡೆದಿರಬೇಕು. ಹಿಂಸಾಚಾರವನ್ನು ಪ್ರಚೋದಿಸುವ, ಪ್ರಚುರಪಡಿಸುವ ಪ್ರಜ್ಞಾಪೂರ್ವಕ ಕೃತ್ಯ ನಡೆದಿರಬೇಕು. ದಯವಿಟ್ಟು ಅದನ್ನು ಪರಿಶೀಲಿಸಿ, "ಎಂದು ಪೀಠ ಹೇಳಿತು.

ಅವರು (ಕೆಳಹಂತದ ನ್ಯಾಯಾಧೀಶರು) ಏನನ್ನೂ ಮಾಡಿಲ್ಲ.
ದೆಹಲಿ ಹೈಕೋರ್ಟ್

ಒಂದು ಹಂತದಲ್ಲಿ ನ್ಯಾಯಮೂರ್ತಿ ಮೃದುಲ್‌ ಅವರು “ಏಕೆ ಜಾಮೀನು ನೀಡಿಲ್ಲ ಎಂಬ ಬಗ್ಗೆ ಪ್ರಾಸಿಕ್ಯೂಟರ್ ನಿಜವಾಗಿಯೂ ನ್ಯಾಯಾಲಯದ ಮನವರಿಕೆ ಮಾಡಿಸಬೇಕಿದೆ” ಎಂದರು.

ಈ ಪ್ರಕರಣದಲ್ಲಿ ಜಾಮೀನು ಏಕೆ ನೀಡಬಾರದು ಎನ್ನುವುದಕ್ಕೆ ಪ್ರಾಸಿಕ್ಯೂಷನ್ ನಿಜಕ್ಕೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಬೇಕಾಗುತ್ತದೆ.
ನ್ಯಾ. ಸಿದ್ಧಾರ್ಥ್ ಮೃದುಲ್

ಇಮಾಮ್ ಪರ ವಕೀಲ ತನ್ವೀರ್ ಅಹ್ಮದ್ ಮೀರ್ ವಾದ ಮಂಡಿಸಿದರು. ಸರ್ಕಾರವನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಪ್ರತಿನಿಧಿಸಿದ್ದರು. ಕೆಳ ಹಂತದ ನ್ಯಾಯಾಲಯ ಜನವರಿಯಲ್ಲಿ ಇಮಾಮ್‌ ಅವರಿಗೆ ಜಾಮೀನು ನಿರಾಕರಿಸಿತ್ತು. ಅಲ್ಲದೆ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಆರೋಪ ನಿಗದಿಪಡಿಸಿತ್ತು.

Kannada Bar & Bench
kannada.barandbench.com